ದಾವಣಗೆರೆ: ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಪ್ಪರಿಗೆ ಸೇರಿದ ಕಾಲೇಜಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ನಗರದ ಡಿಸಿಎಂ ಟೌನ್ಶಿಪ್ನಲ್ಲಿರುವ ರಾಮಪ್ಪರಿಗೆ ಸೇರಿದ ಮಂಜರಿ ಹನುಮಂತಪ್ಪ ಬಿಇಡಿ ಕಾಲೇಜಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಕಾಲೇಜಿನ ಕಿಟಕಿ, ಗಾಜುಗಳು ಪುಡಿಪುಡಿಯಾಗಿವೆ.
ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಏಪ್ರಿಲ್ 23ರ ಮತದಾನ ದಿನದಂದು ಅವಹೇಳನಕಾರಿಯಾಗಿ ರಾಮಪ್ಪ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯ ಪ್ರತಿಭಟನೆಗೆ ನಡೆಸಿತ್ತು. ರಾಮಪ್ಪ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.
ಇದಕ್ಕೆ ತಿರುಗೇಟು ಕೊಟ್ಟಿದ್ದ ರಾಮಪ್ಪ, ನಾನು ವೀರಶೈವ ಲಿಂಗಾಯತ ಸಮುದಾಯ ಅವಹೇಳನ ಮಾಡಿಲ್ಲ, ಕ್ಷಮೆಯಾಚಿಸಲ್ಲ ಎಂದಿದ್ದರು. ಲಿಂಗಾಯತ ಸಮುದಾಯ ಪ್ರತಿಭಟನೆ ನಡೆಸಿದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ನಗರದ ತರಳುಬಾಳು ಬಡಾವಣೆಯಲ್ಲಿ ವಾಸವಿರುವ ಡಾ. ರಾಮಪ್ಪರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಈಗ ರಾಮಪ್ಪರಿಗೆ ಸೇರಿದ ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಲ್ಲು ತೂರಾಟ ನಡೆಸಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.