ದಾವಣಗೆರೆ: ಸಚಿವ ಸ್ಥಾನ ತ್ಯಾಗ ಮಾಡಿ ಸಿ. ಪಿ. ಯೋಗೇಶ್ವರ್ ಅವರನ್ನು ಸಚಿವರನ್ನಾಗಿಸಲಿ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಚುನಾವಣೆಯಲ್ಲಿ ಸೋತ ವ್ಯಕ್ತಿಯ ಹೆಸರು ಪದೇ ಪದೇ ಪ್ರಸ್ತಾಪ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಗೆದ್ದವರಿಗೆ ಮೊದಲು ಆದ್ಯತೆ ನೀಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ಸಚಿವ ರಮೇಶ್ ಜಾರಕಿಹೊಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯೋಗೇಶ್ವರ್ ನಾನು ಒಳ್ಳೆಯ ಸ್ನೇಹಿತರು. ರಾಮನಗರ ಉಸ್ತುವಾರಿ ಸಚಿವನಾಗಿ ನಾನು ಕೆಲಸ ಮಾಡಿದ್ದೇನೆ. ಆದ್ರೆ ಸೋತವರಿಗೆ ಆದ್ಯತೆ ಬೇಡ ಎಂಬ ವಿಚಾರಕ್ಕೆ ಬದ್ಧನಾಗಿದ್ದೇನೆ. ಯಾವ ಯೂಟರ್ನ್ ಹೊಡೆದಿಲ್ಲ. ಸರ್ಕಾರ ರಚನೆಯಾಗಲು ಕಾರಣರಾದ ಕಾಂಗ್ರೆಸ್, ಜೆಡಿಎಸ್ ನಿಂದ ಬಂದವರನ್ನು ಸಚಿವರನ್ನಾಗಿಸಲಿ. ಅದಕ್ಕೆ ಅಭ್ಯಂತರ ಏನಿಲ್ಲ. ಆದ್ರೆ ಸೋತ ಒಬ್ಬ ವ್ಯಕ್ತಿಯ ಹೆಸರು ಹೆಚ್ಚಾಗಿ ಮುನ್ನೆಲೆಗೆ ಬರುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ಮಿತ್ರ ಮಂಡಳಿ ನನ್ನ ವಿರುದ್ಧ ಇಲ್ಲ. ನಾನು ಅವರ ವಿರುದ್ಧ ಇಲ್ಲ. ನಾವೆಲ್ಲರೂ ಒಟ್ಟಾಗಿದ್ದೇವೆ. ಯಾವುದೇ ಭಿನ್ನಮತ ಇಲ್ಲ. ಎಲ್ಲರೊಟ್ಟಿಗೆ ಬಾಂಧವ್ಯ ಚೆನ್ನಾಗಿದೆ. ಕ್ಷೇತ್ರದಲ್ಲಿ ಕಾರ್ಯನಿಮಿತ್ತ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ. ಸಿ. ಟಿ. ರವಿ ಕಚೇರಿ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿಗೆ ಹೋಗದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಜಾರಕಿಹೊಳಿ ತಂಡ ಯಾವುದೇ ಸಭೆ ನಡೆಸಿಲ್ಲ. ನನ್ನ ವಿರುದ್ಧ ಯಾವ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ:ಡಿ.ಕೆ.ಶಿವಕುಮಾರ್‌ಗೆ ಮಾತನಾಡುವುದೇ ಚಟವಾಗಿದೆ: ಆರ್.ಅಶೋಕ್ ತಿರುಗೇಟು
ಮುಂದಿನ ವಾರ ದೆಹಲಿಗೆ ಶಾಸಕರು ಹೋಗಲಿದ್ದೇವೆ. ವರಿಷ್ಠರ ಮುಂದೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತೇವೆ. ಸೋತವರಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಶಾಸಕರದ್ದು. ಪಕ್ಷ ಸಂಘಟನೆಗೆ ದುಡಿದು ಅಧಿಕಾರಕ್ಕೆ ಬರಲು ತಪಸ್ಸು ಮಾಡಿದವರಿಗೆ ಸಚಿವ ಸ್ಥಾನ ನೀಡಲಿ. ಅದನ್ನು ಬಿಟ್ಟು ಸೋತವರಿಗೆ ಸಚಿವ ಸ್ಥಾನ ನೀಡಿದರೆ ಮುಂಬರುವ ಚುನಾವಣೆ ವೇಳೆ ಪರಿಣಾಮ ಬೀರುತ್ತದೆ. ಹಾಗಾಗಿ 17 ಜನ ಶಾಸಕರು ಹಾಗೂ ಪಕ್ಷದ ನಮ್ಮಂತ ಶಾಸಕರನ್ನು ಗುರುತಿಸಲಿ ಎಂದು ರೇಣುಕಾಚಾರ್ಯ ಹೇಳಿದರು.