ಹರಿಹರ: ನಾನು ಡಿಸಿಎಂ ಆಗಬೇಕು ಎಂದು ಜನರು ಬಯಸಿದ್ದಾರೆ. ಆದ್ರೆ ಅವರಿಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿಲ್ಲ. ನಾನು ಅವರ ಮುಂದೆ ನಿಸ್ಸಾಹಯಕನಾಗಿದ್ದೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಮೂರನೇ ಪೂರ್ವಭಾವಿ ಸಭೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನನ್ನನ್ನ ಡಿಸಿಎಂ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಜನರು ಸ್ವಲ್ಪ ಶಾಂತರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸುತ್ತಿದ್ದು, ಅವರಿಗೆ ಹಾಗೂ ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಯಾರೂ ಕೂಡ ಮಾಡಬಾರದು. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಎಷ್ಟು ಉಪ ಮುಖ್ಯಮಂತ್ರಿ ಮಾಡಬೇಕು, ಇಲ್ಲ ಬೇಡವಾ, ಸಚಿವರನ್ನಾಗಿ ಯಾರನ್ನು ಮಾಡಬೇಕು ಎನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸ್ಪಷ್ಟನೆ ನೀಡಿದರು.
ಯಾವುದನ್ನು ನಾವು ಹೇಳಲು ಹೋದರೆ ಅದು ಪಾರ್ಟಿಯಲ್ಲಿ ನಡೆಯೊಲ್ಲ. ಪಾರ್ಟಿ ಗಟ್ಟಿಮುಟ್ಟಾಗಿರುವ ಕಾರಣ ಅವರೇ ನಿರ್ಣಯ ಮಾಡುತ್ತಾರೆ. ನಾವು ಕೇವಲ ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ. ಶ್ರೀರಾಮುಲು ಡಿಸಿಎಂ ಆಗಬೇಕು ಎನ್ನುವುದು ಜನರ ಆಸೆ. ಆದರೆ ಅದನ್ನೇ ಒತ್ತಾಯ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಿಲ್ಲ ಎಂದು ಡಿಸಿಎಂ ವಿಚಾರದ ಕುರಿತು ಸ್ಪಷ್ಟನೆ ನೀಡಿದರು.