ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪುತ್ರಿ ಶ್ರೇಷ್ಠ ಶಾಮನೂರು ಹಾಗೂ ಸಮರ್ಥ ಶಾಮನೂರು ಅವರು ಮೊಟ್ಟಮೊದಲ ಬಾರಿಗೆ ಮತದಾನ ಮಾಡಿದರು. ತಂದೆ ಎಸ್ ಎಸ್ ಮಲ್ಲಿಕಾರ್ಜುನ ಹಾಗೂ ಅಜ್ಜ ಶಿವಶಂಕರಪ್ಪ ಶಾಮನೂರು ಅವರ ಜತೆಗೆ ಆಗಮಿಸಿದ ಶ್ರೇಷ್ಠ ಹಾಗೂ ಸಮರ್ಥ್ ಇಬ್ಬರು ತಮ್ಮ ಹಕ್ಕು ಚಲಾಯಿಸಿದರು. ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ನ ಐಎಂಎ ಹಾಲ್ ಮತಗಟ್ಟೆಯಲ್ಲಿ ಮೊದಲ ಬಾರಿ ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು.
ಶ್ರೇಷ್ಠ ಶಾಮನೂರು ಮಾತನಾಡಿ, ಇದೇ ಮೊದಲ ಬಾರಿಗೆ ಮತದಾನ ಮಾಡಿರುವುದು ಖುಷಿ ತರಿಸಿದೆ. ನಮ್ಮ ಅಣ್ಣ ಸಮರ್ಥ್ ಕೂಡ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಪ್ರತಿಯೊಬ್ಬರು ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಮತದಾರರು ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಂಬಲಿಸಬೇಕು. ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತದಾರರ ಕೈಯಲ್ಲಿ ಇದೆ. ಹೀಗಾಗಿ ಪ್ರತಿಯೊಬ್ಬರು ಮತಗಟ್ಟೆಗೆ ಬಂದು ತಪ್ಪದೇ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಬಳಿಕ ಮತದಾನ ಮಾಡಿರುವ ಶಾಹಿ ಗುರುತಿನ ಬೆರಳು ಪ್ರದರ್ಶಿಸಿದರು.
ತಂದೆ ಜತೆ ಬಂದು ಮತದಾನ ಮಾಡಿದ ಮಲ್ಲಿಕಾರ್ಜುನ್: ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್ ಎಸ್ ಮಲ್ಲಿಕಾರ್ಜುನ್ ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಆಗಮಿಸಿ ಐಎಂಎ ಹಾಲ್ ಮತಗಟ್ಟೆಯಲ್ಲಿ ಮತದಾನ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು ಸಹ ಮತದಾನ ಮಾಡಿದರು. ಈ ವೇಳೆ ಮಾವ ಹಾಗೂ ಪತಿಗೆ ಡಾ ಪ್ರಭಾ ಮಲ್ಲಿಕಾರ್ಜುನ್ ಅವರು ಸಾಥ್ ನೀಡಿದರು.
ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ಮತಚಲಾವಣೆ: ದಾವಣಗೆರೆ ನಗರದ ತರಳಬಾಳು ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಮತ ಚಲಾವಣೆ ಮಾಡಿದರು. ಬಳಿಕ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಎಂಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ದಾವಣಗೆರೆ ದಕ್ಷಿಣ ಹಾಗೂ ಉತ್ತರದಲ್ಲಿ ಕ್ಷೇತ್ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೆ ಗೆಲ್ತಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ 125 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಈಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂಬ ಆಸೆ ಇದೆ. ಪಕ್ಷ ಏನೂ ತೀರ್ಮಾನ ಮಾಡ್ತಿದೆ ಮುಂದೆ ನೋಡೋಣ, ನನ್ನ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಸಂಸದರು ಅಭಿಪ್ರಾಯ ತಿಳಿಸಿದರು.
90 ವಿಕಲಚೇತನರಿಂದ ಮತದಾನ: ವಿಕಲಚೇತನರಲ್ಲಿ ಕುಗ್ಗದ ಮತದಾನ ಉತ್ಸಾಹ, ಮೊದಲ ಬಾರಿಗೆ ಮತದಾನ ಮಾಡಿದ ಅಂದ ವಿದ್ಯಾರ್ಥಿ...
ವಿಕಲಚೇತನರು ಉತ್ಸಾಹದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ದಾವಣಗೆರೆ ತಾಲೂಕಿನ ಹದಡಿ ಗ್ರಾಪಂ ವ್ಯಾಪ್ತಿ 6 ಮತಗಟ್ಟೆ ತೆರೆಯಲಾಗಿದ್ದು, 06 ಮತಗಟ್ಟೆಯಲ್ಲಿ ವಿಕಲಚೇತನರು ತಮ್ಮ ಹಕ್ಕು ಚಲಾಯಿಸಿದರು. ಈ ಆರು ಮತಗಟ್ಟೆಯಲ್ಲಿ 90 ಜನ ವಿಕಲಚೇತನರು ಮತದಾನ ಮಾಡಿದರು. 90 ಜನ ಮತದಾರರ ಪೈಕಿ 59 ವಿಕಲಚೇತನ ಪುರುಷರು, 31 ವಿಕಲಚೇತನ ಮಹಿಳೆಯರಿಂದ ಮತದಾನ ನಡೆದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಂಧ ವಿದ್ಯಾರ್ಥಿಯಿಂದ ಮೊದಲ ಬಾರಿಗೆ ಮತದಾನ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಂದು ಅಂಧ ವಿದ್ಯಾರ್ಥಿ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುವುದರೊಂದಿಗೆ ಹರ್ಷ ವ್ಯಕ್ತಪಡಿಸಿದನು. ದಾವಣಗೆರೆ ದಕ್ಷಿಣ ಕ್ಷೇತ್ರದ ನಿವಾಸಿ ಯೋಗೇಶ್ ಮತ ಚಲಾವಣೆ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮತ ಚಲಾವಣೆ ಮಾಡಿದ್ದು ಖುಷಿ ತಂದಿದೆ ಎಂದು ತಿಳಿಸಿದರು.
ಇದನ್ನೂಓದಿ:ಹುಬ್ಬಳ್ಳಿಯಲ್ಲಿ 400ಕ್ಕೂ ಅಧಿಕ ಮತದಾರರ ಹೆಸರು ಡಿಲೀಟ್: ಮತಗಟ್ಟೆಗೆ ಬಂದವರಿಗೆ ಕಾದಿತ್ತು ಬಿಗ್ ಶಾಕ್