ದಾವಣಗೆರೆ : ಸಿಎಂ ಬಿ ಎಸ್ ಯಡಿಯೂರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಕಷ್ಟು ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಶಾಸಕರು ಎರಡು ದಿನಗಳಿಂದ ಯಡಿಯೂರಪ್ಪನವರ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ನಿನ್ನೆಯಿಂದ ಯಡಿಯೂರಪ್ಪ ಮನೆಯಲ್ಲೇ ಇದ್ದು, ತಮಗೂ ಕೂಡ ಸಚಿವ ಸ್ಥಾನ ನೀಡಬೇಕೆಂದು ಲಾಬಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಎಸ್ ವಿ ರಾಮಚಂದ್ರಪ್ಪ, ನಾನು ಮೂರು ಬಾರಿ ಗೆಲುವು ಸಾಧಿಸಿದ್ದೇನೆ. ಪಕ್ಷಕ್ಕೆ ನಮ್ಮದೇ ಆದಂತಹ ಕೊಡುಗೆ ಇದೆ. ಅಲ್ಲದೇ ಯಡಿಯೂರಪ್ಪನವರಿಗೆ ನನ್ನ ಬಗ್ಗೆ ಒಲವು ಇದೆ. ಇದರಿಂದ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದರು.
ಬರದ ನಾಡಿಗೆ ಸಿಗಲಿದಿಯಾ ಸಚಿವ ಸ್ಥಾನ?
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದಾಗಲೇ ಸಚಿವ ಸ್ಥಾನ ಸಿಗಬೇಕಿತ್ತು. ಆದ್ರೆ, ಕೆಲ ಗೊಂದಲಗಳಿಂದ ಸಿಗಲಿಲ್ಲ ಎಂದು ಶಾಸಕ ರಾಮಚಂದ್ರಪ್ಪ ತಿಳಿಸಿದರು. ಈ ಸಲ ಅವಕಾಶ ನೀಡುವ ಬಗ್ಗೆ ಬಿಎಸ್ವೈ ಭರವಸೆ ನೀಡಿದ್ದಾರೆ. ಮೂರು ಸಲ ಶಾಸಕ ಹಾಗೂ ವಾಲ್ಮೀಕಿ ಸಮಾಜದವನಾದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಅಲ್ಲದೆ ವಾಲ್ಮೀಕಿ ನಿಗಮದ ಅಧ್ಯಕ್ಷನನ್ನಾಗಿಯೂ ಯಡಿಯೂರಪ್ಪನವರು ಆಯ್ಕೆ ಮಾಡಿದ್ದರು. ಈ ಬಾರಿ ಸಚಿವ ಸ್ಥಾನ ಸಿಗುವ ಎಲ್ಲಾ ಲಕ್ಷಣಗಳು ಇದೆ ಎಂದರು.