ದಾವಣಗೆರೆ: ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ರಥೋತ್ಸವ ಫೆ. 14 ರಂದು ವಿಜೃಂಭಣೆಯಿಂದ ಜರುಗಲಿದ್ದು, ಫೆ.9 ರಂದು ನಂದಿ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.9 ರಂದು ಸ್ವಾಮಿಗೆ ಹರಿದ್ರಾಲೇಪನ, ಕಂಕಣ ಧಾರಣೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. 10 ರಂದು ರಾತ್ರಿ 9 ಕ್ಕೆ ಬಸವೇಶ್ವರ ಆರೋಹಣ ಉತ್ಸವ, ಫೆ. 11ರಂದು ಸರ್ಪರೋಹಣ, ಫೆ.12 ಮತ್ತು 13 ರಂದು ಕಳಸಾರೋಹಣ, ಹರಿದ್ರಾ ಲೇಪನ, ಫೆ. 14 ರಂದು ಬೆಳಗ್ಗೆ 8 ಕ್ಕೆ ಗಜಾರೋಹಣ ಉತ್ಸವ ಸಂಜೆ. 6 ಕ್ಕೆ ಶ್ರೀ ವೀರಭದ್ರೇಶ್ವರ ಮಹಾಸ್ವಾಮಿಯ ಮಹಾ ರಥೋತ್ಸವ ನಡೆಯಲಿದೆ ಎಂದರು.
ಇನ್ನು ವೀರಗಾಸೆ ಸೇವೆ ಭಕ್ತರಿಂದ ಜರುಗಲಿದೆ. ಫೆ, 15 ಕ್ಕೆ ಓಕುಳಿ ಸೇವೆ, 16 ಕ್ಕೆ ಉಯ್ಯಾಲೆ ಮಂಟಪದಿಂದ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಲಿದ್ದು, ಫೆ. 17ಕ್ಕೆ ಕಂಕಣ ವಿಸರ್ಜನೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.