ದಾವಣಗೆರೆ : ಇಂದು ಸಾಕಷ್ಟು ಜನ ಕೈ ಕಮಲದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ರು. ಕೆಲವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ರೆ, ಇನ್ನು ಕೆಲ ಅಭ್ಯರ್ಥಿಗಳು ಬೃಹತ್ ಮೆರವಣಿಗೆ ನಡೆಸುವ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಇಂದು ಸಾಂಕೇತಿಕ ನಾಮಪತ್ರ ಸಲ್ಲಿಸಿದ್ರು. ಕೆಲ ಆತ್ಮೀಯ ಬೆಂಬಲಿಗರ ಜೊತೆ ಮಹಾನಗರ ಪಾಲಿಕೆಗೆ ಆಗಮಿಸಿದ ಶಾಮನೂರು ನಾಮಪತ್ರವನ್ನು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಅವರಿಗೆ ಸಲ್ಲಿಕೆ ಮಾಡಿದರು.
ಇದಲ್ಲದೇ ದಾವಣಗೆರೆ ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಸಹ ಎರಡನೇ ಬಾರಿ ಸಾಂಕೇತಿಕ ನಾಮಪತ್ರ ಸಲ್ಲಿಸಿದ್ರು. ಇನ್ನು ಎಸ್ ಎಸ್ ಮಲ್ಲಿಕಾರ್ಜುನ್ಗೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಆತ್ಮೀಯರು ಸಾಥ್ ನೀಡಿದ್ರು. ಇದಲ್ಲದೆ ಇದೇ ಏಪ್ರಿಲ್ 20ರಂದು ಬೃಹತ್ ಮೆರವಣಿಗೆ ಮೂಲಕ ಶಾಮನೂರು ಶಿವಶಂಕರಪ್ಪ ಮತ್ತು ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಪತ್ನಿಯೊಂದಿಗೆ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಜಗಳೂರಿನ ಬಿಜೆಪಿ ಅಭ್ಯರ್ಥಿ: ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಸ್ ವಿ ರಾಮಚಂದ್ರ ಅವರು ಬೃಹತ್ ಮೆರವಣಿಗೆ ಮೂಲಕ ತಮ್ಮ ಪತ್ನಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಜಗಳೂರು ಪಟ್ಟಣದ ಮಾರಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಶಾಸಕ ಎಸ್ ವಿ ರಾಮಚಂದ್ರ ಅವರು ತಮ್ಮ ಸಾಕಷ್ಟು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ವಿಶೇಷ ಅಂದ್ರೆ ಎಸ್ ವಿ ರಾಮಚಂದ್ರ ಅವರು ಮೂರು ಬಾರಿ ಶಾಸಕರಾಗಿದ್ದು, ಚುನಾವಣೆ ಅವಧಿಯಲ್ಲಿ ಪ್ರತಿಬಾರಿಯೂ ಪತ್ನಿ ಇಂದಿರಾ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರಿಂದ ಗೆಲುವು ನಿಶ್ಚಿತ ಎಂಬುದು ಶಾಸಕರ ನಂಬಿಕೆಯಾಗಿದೆ.
ಇದನ್ನೂ ಓದಿ: ವರುಣ ಕ್ಷೇತ್ರದಿಂದ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತಿ
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ: ಇದರಿಂದ ಪತ್ನಿ ಇಂದಿರಾವರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡ್ತೀನಿ ಅಂದ್ರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ನಾಮಪತ್ರ ಸಲ್ಲಿಕೆ ಮಾಡಿದ್ದೇನೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಆ ಕೆಲಸಗಳ ಮೇಲೆಯೇ ನಾನು ಗೆಲುವು ಸಾಧಿಸಲಿದ್ದೇನೆ. ಇಡೀ ತಾಲೂಕು ನೀರಾವರಿ ಮಾಡುವಾಸೆ ಇದೆ. ಅದನ್ನು ಈಡೇರಿಸುವುದೇ ನನ್ನ ಗುರಿ. ಇನ್ನು ಇಲ್ಲಿಯ ತನಕ ನನ್ನ ಕ್ಷೇತ್ರದಲ್ಲಿ ಗಲಾಟೆ ಗದ್ದಲಗಳು ನಡೆಯದಂತೆ ನೋಡಿಕೊಂಡಿದ್ದೇನೆ. ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ ಎಂದರು.
ಇದನ್ನೂ ಓದಿ: ವರುಣ ಕ್ಷೇತ್ರದಿಂದ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ: ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತಿ