ದಾವಣಗೆರೆ: ಈಗಾಗಲೇ ಎಸ್ಎಸ್ ಮಾಲ್ ಹಾಗೂ ಎಸ್ಎಸ್ ಆಸ್ಪತ್ರೆಯನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪ ಮಾಡಿರುವ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಇದೀಗ ಶಾಮನೂರು ಕುಟುಂಬದ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2001ರಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಗಾಗಿ 83,000 ಸಾವಿರ ಚದರ ಅಡಿಯಷ್ಟು ಜಾಗವನ್ನು ದೂಡಾದಿಂದ (ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ) ಕಡಿಮೆ ಬೆಲೆಯಲ್ಲಿ ಪಡೆದುಕೊಂಡಿದ್ದಾರೆ. ಯಾರೊ ಮಾಡಿದ ಲೇಔಟ್ನಲ್ಲಿ ನಾಲ್ಕೈದು ನಿವೇಶನಗಳನ್ನು ಪಡೆದು ಬಳಿಕ ಅದರ ಸುತ್ತ ಬೇಲಿ ಹಾಕಿ ಅದನ್ನೇ ಏಕ ನಿವೇಶನ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಇನ್ನು ಎಸ್ಎಸ್ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲು 56 ಎಕರೆ ನೀರಾವರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಬಳಿಕ ನಾಲ್ಕು ಲಕ್ಷದಂತೆ ಒಂದು ಎಕರೆಯನ್ನು ಪಡೆದು ಏಕೆ ಆಸ್ಪತ್ರೆ ನಿರ್ಮಾಣ ಮಾಡಿದ್ದೀರಿ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದರು.
ಎಸ್.ಎಸ್.ಗಣೇಶ್ ಅವರಿಗೆ ಸೇರಿದ ಶಾಮನೂರು ಗ್ರಾಮದಲ್ಲಿರುವ ಸರ್ವೇ ನಂ.76/1, 2ರಲ್ಲಿ ಮೂರು ನಿವೇಶನಗಳಿದ್ದು, ಅದರ ಮುಂಭಾಗದಲ್ಲಿ 9.14 ಮೀ. ಅಗಲದ ಎರಡು ರಸ್ತೆಗಳು ಅನುಪಯುಕ್ತವಾಗಿವೆ ಎಂದು ದೂಡಾಗೆ ಪತ್ರ ಬರೆದ ಬಳಿಕ ಅವುಗಳನ್ನು ಒತ್ತುವರಿ ಮಾಡಿದ್ದಾರೆ. ಇನ್ನು ಮಾಲತೇಶ್ ಜಾಧವ್ ದೂಡ ಅಧ್ಯಕ್ಷರಾಗಿದ್ದ ವೇಳೆ ನಿಜಲಿಂಗಪ್ಪ ಬಡಾವಣೆಯಲ್ಲಿ ನಿವೇಶನಗಳನ್ನು ಹರಾಜು ಮಾಡುವ ಬದಲು ಐದು ನಿವೇಶನಗಳಿಗೆ ದೂಡಾ ಅನುಮೋದನೆ ಪಡೆದುಕೊಂಡು ಬರೆದುಕೊಂಡಿದ್ದಾರೆ ಎಂದು ಆರೋಪ ಮಾಡಿದರು.