ದಾವಣಗೆರೆ: ಸೇವಾಲಾಲ್ ಮಹಾರಾಜರು ನ್ಯಾಮತಿ ಭಾಗದಲ್ಲಿ ಹುಟ್ಟಿದ್ದು, ಇಡೀ ಸಮಾಜವನ್ನು ಸುಧಾರಣೆ ಮಾಡಲು ಹೊರಟವರು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಇರುವ ಸಮಾಜ ಎಂದರೆ ಅದು ಲಂಬಾಣಿ ಸಮಾಜ. ಎಲ್ಲಾ ರಂಗದಲ್ಲಿ ಈ ಸಮಾಜದ ಮಕ್ಕಳು ಮುಂದೆ ಬರುತ್ತಿದ್ದಾರೆ. ಇದೊಂದು ಬುದ್ಧಿವಂತರ ಸಮಾಜ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆದ ಸಂತ ಸೇವಾಲಾಲ್ ಅವರ 284 ನೇ ಜಯಂತೋತ್ಸವದಲ್ಲಿ ಮಾತನಾಡಿದರು.
ಮೀಸಲಾತಿ ಹೆಚ್ಚಿಸಿದ್ದು ನಮ್ಮ ಸರ್ಕಾರ: 75 ವರ್ಷಗಳಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಿಗೆ ಮಾಡಿದ ಸರ್ಕಾರ ನಮ್ಮ ಸರ್ಕಾರ. ಉದ್ಯೋಗಕ್ಕೆ, ಶಿಕ್ಷಣಕ್ಕೆ ಮೀಸಲಾತಿ ಸಹಾಯಕವಾಗುತ್ತದೆ. ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮ ಮಾಡಿದರು. 52 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಿ ತಾಂಡಾಗಳನ್ನು ಗ್ರಾಮವಾಗಿ ಪರಿವರ್ತಿಸಿದ್ದೇವೆ. ಮಾರ್ಚ್ನಲ್ಲಿ ಹೊನ್ನಾಳಿಯಲ್ಲಿ ಸಮಾವೇಶ ಮಾಡಿ ಇನ್ನುಳಿದವರಿಗೆ ಹಕ್ಕು ಪತ್ರ ನೀಡಲಾಗುತ್ತದೆ. ಸೂರಗೊಂಡನಕೊಪ್ಪದ ಸಮಗ್ರ ಅಭಿವೃದ್ಧಿಗೆ 10 ಕೋಟಿ ಮೀಸಲಿಡುತ್ತೇವೆ ಎಂದು ಘೋಷಿಸಿದರು.
ವಸತಿ ಶಾಲೆಗಳನ್ನು ನಿರ್ಮಾಣ ಮಾಡುತ್ತೇವೆ: ಈ ಸಮಾಜ ಎಲ್ಲಿ ಜಾಸ್ತಿ ಇದೆ ಅಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳನ್ನು ನಿರ್ಮಾಣ ಮಾಡುತ್ತೇವೆ. ಕೊಪ್ಪಳದಲ್ಲಿ ಹೆರಿಟೇಜ್ ವಿಲೇಜ್, ಬೀದರ್ನಲ್ಲಿ ಕೌಶಲ್ಯಭಿವೃದ್ಧಿ ಕೇಂದ್ರ ನಿರ್ಮಾಣ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತೇವೆ. ನಿಮ್ಮ ಸಮಾಜಕ್ಕೆ ವಿಶೇಷ ಅನುದಾನ ನೀಡುತ್ತೇವೆ. ಈ ಬದಲಾವಣೆ ಸಂದರ್ಭದಲ್ಲಿ ನಮ್ಮ ಬೆನ್ನೆಲುಬಾಗಿ ನಿಲ್ಲಬೇಕು, ಯಾರು ಏನೇ ಹೇಳಿದರು ಅದನ್ನು ನಂಬದೇ ಜಾಗೃತರಾಗಿ. ಎಸ್ಸಿ ಎಸ್ಟಿಗಳಿಗೆ ಕಂದಾಯ ಮನೆಗಳನ್ನು ಕಟ್ಟಿಸಿಕೊಡುತ್ತೇವೆ ಎಂದರು.
ತಾರತಮ್ಯ ಮಾಡದೇ ಸೌಲಭ್ಯ: ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ನಮ್ಮ ಸರ್ಕಾರ, ಜಾತಿ ಮತ ಧರ್ಮಗಳಲ್ಲಿ ತಾರತಮ್ಯ ಮಾಡದೇ ಸೌಲಭ್ಯಗಳನ್ನು ನೀಡುತ್ತದೆ. ಈ ಸಮಾಜದ ಹಲವಾರು ದಾರ್ಶನಿಕರು ಕೊಡುಗೆ ನೀಡಿದ್ದಾರೆ. ಲಂಬಾಣಿ ಸಮಾಜ ಅತ್ಯಂತ ಶಿಸ್ತನ್ನು ಹೊಂದಿರುವ ಸಮಾಜವಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಸಮಾಜ ಕೂಡ ಹೌದು ಎಂದರು.
ಈ ಯಾತ್ರಾ ಸ್ಥಳವನ್ನು ಅಭಿವೃದ್ಧಿ ಪಡಿಸಿದ್ದು, ನಮ್ಮ ಸರ್ಕಾರ. ಈ ಯಾತ್ರಾ ಸ್ಥಳದಲ್ಲಿ ಏನೂ ಸೌಲಭ್ಯಗಳಿದ್ದಿಲ್ಲ, ನಮ್ಮ ಸರ್ಕಾರ ಈ ಕ್ಷೇತ್ರಕ್ಕೆ ಮೂಲ ಸೌಕರ್ಯಗಳನ್ನು ನೀಡಿದೆ. ಈ ಐತಿಹಾಸಿಕ ಸಮಾವೇಶದ ಮೂಲಕ ಸಮಾಜ ಬದಲಾವಣೆ ಮಾಡಬಹುದಾಗಿದೆ, ಮೊದಲು ಈ ಕ್ಷೇತ್ರದಲ್ಲಿ ವಸತಿ ಮಾಡಲು ಕೂಡ ಸ್ಥಳ ಇರಲಿಲ್ಲ, ನಮ್ಮ ಸರ್ಕಾರ ಬಂದಾಗ ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಭಾಗದಲ್ಲಿ ಸಭೆ ನಡೆಸಿ ಬಂಜಾರ ಸಮಾಜಕ್ಕೆ ಹಕ್ಕು ಪತ್ರ ನೀಡಲು ನಿರ್ಧಾರ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಕೆಲ ದಿನಗಳ ಹಿಂದೆ 50 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ಸೂರಗೊಂಡನಕೊಪ್ಪದ ಭಾಯಾಗಡ್ನಲ್ಲಿ ಕೂಡ ರೈಲ್ವೆ ನಿಲ್ದಾಣ ಕೂಡ ಮಾಡಿಸಿದ್ದೇವೆ. ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ: ಅಡಕೆಗೆ ಕ್ಯಾನ್ಸರ್ ತರಿಸುವುದಲ್ಲ, ಗುಣಪಡಿಸುವ ಶಕ್ತಿ ಇದೆ ಎಂಬ ವರದಿ ಕೈಸೇರಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ