ಹರಿಹರ: ವಾಲ್ಮೀಕಿ ಸಮಾಜಕ್ಕೆ ಸಿಗಬೇಕಾದ 7.5 ಮೀಸಲಾತಿ ಸಂಬಂಧ ನಾಗಮೋಹನ್ ದಾಸ್ ವರದಿ ವಿಳಂಬವಾಗಿದ್ದು, ನಮ್ಮ ಸಮಾಜದ ಶಾಸಕರು, ಮುಖಂಡರು ನನ್ನ ಮೇಲೆ ಸಾಕಷ್ಟು ಒತ್ತಡ ಹೇರಿದ್ದಲ್ಲದೇ ಆಕ್ರೋಶ ತೋರಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆಯ ಮೂರನೇ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀಸಲಾತಿ ಹೋರಾಟದಲ್ಲಿ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರಬೇಕು ಎನ್ನುವುದು ಸ್ವಾಮೀಜಿಗಳ ಆಶಯವಾಗಿದೆ. ಅವರ ಮಾತಿಗೆ ನಾವು ಸದಾ ಬದ್ಧರಾಗಿರುತ್ತೇವೆ ಎಂದರು.
ಇದೇ ತಿಂಗಳ 10ರೊಳಗೆ ಮುಖ್ಯಮಂತ್ರಿ ಬಿಎಸ್ವೈ ಅವರನ್ನು ಭೇಟಿ ಮಾಡಲು ಸಮಾಜದ ಶಾಸಕರು ಒಪ್ಪಿದ್ದಾರೆ. ಮುಖ್ಯಮಂತ್ರಿಗಳು ಮೀಸಲಾತಿಯನ್ನು ಜಾತ್ರೆಯಲ್ಲಿ ಘೋಷಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಶಾಸಕ ಶಿವನಗೌಡ ಪಾಟೀಲ್, ಮಠದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿದ್ದೇವೆ. ಇದುವರೆಗೂ ಮೀಸಲಾತಿ ನೀಡದಿರುವುದು ಸಾಕಷ್ಟು ಬೇಸರವಿದೆ. ರಾಮುಲು ಅವರಿಗೆ ಮೀಸಲಾತಿ ವಿಚಾರವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದೇವೆ. ಸರ್ಕಾರದ ಜೊತೆ ಮಾತನಾಡಿ ಮೀಸಲಾತಿ ಬೇಡಿಕೆಯನ್ನು ಈಡೇಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಮೀಸಲಾತಿ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಮೀಸಲಾತಿ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರ ಈ ಬಗ್ಗೆ ಚರ್ಚೆ ಮಾಡಿ ವಾಲ್ಮೀಕಿ ಜಾತ್ರೆಯೊಳಗೆ ಮೀಸಲಾತಿ ಘೋಸಿಸುವಂತೆ ಮನವಿ ಮಾಡಿದರು.
ಇನ್ನು ಶ್ರೀ ವಾಲ್ಮೀಕಿ ಮಠದ ಪೀಠಾಧಿಪತಿ ಪ್ರಸನ್ನಾನಂದಪುರಿ ಶ್ರೀಗಳು ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಸಮಾಜವು ಸಂಘಟನೆಯಾಗುತ್ತಿದೆ. ಮಠದ ಆವರಣದಲ್ಲಿ ಎರಡನೇ ವರ್ಷದ ವಾಲ್ಮೀಕಿ ಜಾತ್ರೆ ಮಾಡಲು ನಿರ್ಧರಿಸಿದ್ದು, ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಮುಖ್ಯಮಂತ್ರಿಗಳ ಬಗ್ಗೆ ಅಪಾರವಾದ ನಂಬಿಕೆ ಇದೆ. ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕು ಎಂದರು. ಮೀಸಲಾತಿ ಘೋಷಣೆ ಮಾಡಲಿಲ್ಲ ಎಂದರೆ ಸಮಾಜದ ಎಲ್ಲಾ ಪಕ್ಷಗಳ ಶಾಸಕರ, ಸಚಿವರ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಮುಂದಿನ ನಿರ್ಧಾರ ಅತ್ಯಂತ ಕಠೋರವಾಗಿರುತ್ತೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಸಂದೇಶ ನೀಡಿದರು.