ದಾವಣಗೆರೆ: ಜಿಲ್ಲೆಯಲ್ಲಿ ಮೂರು ಕೊರೊನಾ ಸೋಂಕಿತರಿದ್ದು, ಈ ಪೈಕಿ ಇಬ್ಬರದ್ದು ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದ್ದಾರೆ.
ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದಕ್ಕೂ ಮೊದಲು ಪ್ರಾಥಮಿಕ ವರದಿಯಲ್ಲಿ ಕೊರೊನಾ ಸೋಂಕಿತರ ನೆಗೆಟಿವ್ ಎಂದು ಬಂದಿತ್ತು. ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿಯೂ ಈಗ ನೆಗೆಟಿವ್ ಬಂದಿದೆ. ಈ ಮೂಲಕ ಮೂರು ಖಚಿತಪಟ್ಟ ಪ್ರಕರಣಗಳ ಸೋಂಕಿತರ ಪೈಕಿ ಇಬ್ಬರು ಗುಣಮುಖ ಆಗಮಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ಗಯಾನದಿಂದ ಬಂದಿದ್ದ ಚಿತ್ರದುರ್ಗದ ರೋಗಿ ನಂಬರ್ ಪಿ-42 ಮಹಿಳೆಗೆ ಕೊರೊನಾ ಸೋಂಕು ಇದ್ದದ್ದು ದೃಢಪಟ್ಟಿತ್ತು. ಇವರನ್ನು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಚಿಕಿತ್ಸೆ ಇಲ್ಲಿ ನೀಡಲಾಗುತ್ತಿದ್ದ ಕಾರಣ ದಾವಣಗೆರೆಯಲ್ಲಿ ಪ್ರಥಮ ಪ್ರಕರಣ ಎಂದು ಪರಿಗಣಿಸಲಾಗಿತ್ತು.
ಬಳಿಕ ದಾವಣಗೆರೆಗೆ ಸ್ಪೇನ್ ನಿಂದ ಬಂದಿದ್ದ ವೈದ್ಯನಿಗೂ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಈ ನಂತರ ಶಿಕಾಗೋದಿಂದ ಬಂದಿದ್ದ 21 ವರ್ಷದ ರೋಗಿ ನಂಬರ್-75 ಯುವಕನಲ್ಲಿ ಸೋಂಕು ಇದ್ದದ್ದು ಖಚಿತವಾಗಿತ್ತು. ಈತ ಚಿತ್ರದುರ್ಗದಿಂದ ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ಗೆ ಬಂದಾಗ ಸೋಂಕು ಇರುವುದು ಖಚಿತವಾಗಿತ್ತು. ಆದ್ರೆ, ಸ್ಪೇನ್ನಿಂದ ಬಂದಿದ್ದ ಯುವಕನ ವರದಿ ಇನ್ನು ಬರಬೇಕಿದ್ದು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಅವಲೋಕನ ಮುಂದುವರಿಸಲಾಗಿದೆ. ಇಂದು ತಡರಾತ್ರಿ ಬರುವ ಸಾಧ್ಯತೆ ಇದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದರು.
ಚಿತ್ರದುರ್ಗದ ಮಹಿಳೆ ಪಿ-42 ಹಾಗೂ ಯುವಕ ಪಿ-75 ಇಬ್ಬರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. 24 ಗಂಟೆಯ ಅವಧಿಯಲ್ಲಿ ಎರಡು ಬಾರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡೂ ವರದಿಯಲ್ಲಿಯೂ ನೆಗೆಟಿವ್ ಎಂದು ಬಳಿಕ ಗುಣಮುಖರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 14 ದಿನಗಳ ಕಾಲ ಇಬ್ಬರೂ ಇಬ್ಬರೂ ಗೃಹ ಬಂಧನದಲ್ಲಿರಬೇಕು. ನಿತ್ಯವೂ ಆರೋಗ್ಯದ ಕುರಿತು ಸ್ವಯಂ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.