ದಾವಣಗೆರೆ: ದೇಶದ ಇತಿಹಾಸದಲ್ಲೇ ಸೋತವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಇದು 17 ಶಾಸಕರ ತ್ಯಾಗದಿಂದ ಇವರಿಗೆ ಡಿಸಿಎಂ ಸ್ಥಾನ ಸಿಕ್ಕಿದೆ. ಆದರೆ, ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿರುವುದು ದುರಂಹಕಾರದ ಪರಾಮಾವಧಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದಂತೆ ಡಿಸಿಎಂ ಸವದಿ ಅವರ ಕಥೆಯಾಗಿದೆ. 17 ಶಾಸಕರ ತ್ಯಾಗದಿಂದ ನಮಗೆ ಅಧಿಕಾರ ಸಿಕ್ಕಿದೆ. ಆದರೆ, ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿ ಹುಚ್ಚು ಹುಚ್ಚಾದ ಹೇಳಿಕೆ ಕೊಟ್ಟರೆ ಸಹಿಸುವುದಿಲ್ಲ. ಈ ಬಗ್ಗೆ ಪ್ರಧಾನಿಗಳಿಗೆ, ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇನೆ. ಯಡಿಯೂರಪ್ಪರೊಂದಿಗೆ ಮಾತನಾಡುತ್ತೇನೆ. ಅನರ್ಹ ಶಾಸಕರು ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿಲ್ಲ, ಬರುತ್ತೇವೆ ಎಂದರೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಅವರ ಬಗ್ಗೆ ಹೇಳಿಕೆ ನೀಡಲು ಲಕ್ಷ್ಮಣ್ ಸವದಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಕಿಡಿಕಾರಿದರು.