ದಾವಣಗೆರೆ : ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾದಿಂದ ಗುಣಮುಖರಾಗಿ ಬಂದ ಕಾರ್ಪೊರೇಟರ್ ಇಮ್ರಾನ್ ಪಾಷಾ ಅದ್ದೂರಿ ಮೆರವಣಿಗೆ ನಡೆಸಿದ್ದು ಸರಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಮೆರವಣಿಗೆ ಮಾಡಿರುವುದು ದೇಶದ್ರೋಹದ ಕೆಲಸ. ಇಮ್ರಾನ್ ಪಾಷಾ ಯುದ್ಧ ಗೆದ್ದು ಬಂದಿದ್ದರಾ?. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಗೌರವದಿಂದ ಮನೆಯಲ್ಲಿ ಇರುವುದನ್ನು ಬಿಟ್ಟು ಮೆರವಣಿಗೆ ನಡೆಸುವ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಪಾದರಾಯನಪುರದ ಪುಂಡರನ್ನು ಶಾಸಕ ಜಮೀರ್ ಅಹಮ್ಮದ್ ಬಿಡುಗಡೆ ಮಾಡಿಸಿ ಹಣ ನೀಡಿದ್ದಾರೆ.
ಪುಂಡರಿಗೆ ಬುದ್ಧಿ ಹೇಳುವುದನ್ನು ಬಿಟ್ಟು ತಮ್ಮ ಸೀಟು ಉಳಿಸಿಕೊಳ್ಳಲು ರಾಜಕಾರಣ ಮಾಡಿದ್ದಾರೆ. ಪರೋಕ್ಷವಾಗಿ ಕೊರೊನಾ ಸೋಂಕು ಹರಡಲು ಕಾರಣರಾಗುತ್ತಿರುವ ಜಮೀರ್ ಹಾಗೂ ಇಮ್ರಾನ್ ಪಾಷಾ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ ಎಂದರು.
ಇಮ್ರಾನ್ ಪಾಷಾ ಸಾಮಾಜಿಕ ಅಂತರ ಕಾಪಾಡದೆ ಮೆರವಣಿಗೆ ಮಾಡಿ ಮನುಕುಲಕ್ಕೆ ಅವಮಾನ ಮಾಡಿದ್ದಾರೆ. ಕೊರೊನಾ ಸಂಖ್ಯೆ ಹೆಚ್ಚಾಗಿರುವ ಈ ವೇಳೆಯಲ್ಲಿ ಮೆರವಣಿಗೆ ಮಾಡಿದ್ದು ಖಂಡನೀಯ ಎಂದರು.