ಬೆಂಗಳೂರು: ದಾವಣಗೆರೆ ಜಿಲ್ಲೆಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಆರ್‌ಟಿ ನಗರದಲ್ಲಿರುವ ನೂತನ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ದಾವಣಗೆರೆ ಬಿಜೆಪಿ ಶಾಸಕರ ನಿಯೋಗ ಭೇಟಿ ನೀಡಿತು.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ರಾಮಚಂದ್ರ, ಲಿಂಗಣ್ಣ ಅವರನ್ನೊಳಗೊಂಡ ನಿಯೋಗ ಜಿಲ್ಲೆಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿತು.
ಜಿಲ್ಲೆಯ 8 ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣ ಮತ್ತು ಹರಿಹರ ಹೊರತುಪಡಿಸಿದರೆ ಜಗಳೂರು, ಹರಪನಹಳ್ಳಿ, ದಾವಣಗೆರೆ ಉತ್ತರ, ಮಾಯಕೊಂಡ, ಚನ್ನಗಿರಿ ಮತ್ತು ಹೊನ್ನಾಳಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ಸಚಿವ ಸ್ಥಾನ ನೀಡುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿತು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಸಾಕಷ್ಟು ಮನವಿ ಮಾಡಿದರೂ ಅವಕಾಶ ಲಭಿಸಲಿಲ್ಲ. ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾಗಿರುವ ದಾವಣಗೆರೆ ಜಿಲ್ಲೆಯನ್ನು ಕಡೆಗಣಿಸಬಾರದು, ಜಿಲ್ಲೆಯಿಂದ ಯಾರಿಗೇ ಅವಕಾಶ ನೀಡಿದರೂ ನಮ್ಮ ಸಹಮತವಿದೆ ಒಟ್ಟಿನಲ್ಲಿ ಒಬ್ಬರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತು.
ಹೆಚ್ಚಿನ ಓದಿಗೆ: ಹೊರಗಿನಿಂದ ಬಂದವರೆಂದು ಏನೂ ಇಲ್ಲ, ಎಲ್ಲರೂ ನಮ್ಮವರೇ.. ಸಿ ಟಿ ರವಿ
ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗದ ಮನವಿ ಆಲಿಸಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ, ಸಂಪುಟ ರಚನೆ ವೇಳೆ ಎಲ್ಲ ಆಯಾಮದಲ್ಲಿಯೂ ಯೋಚಿಸಲಾಗುತ್ತದೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿ ಸಂಪುಟ ರಚನೆ ಮಾಡಲಾಗುತ್ತದೆ ಸಾಧ್ಯವಾದಷ್ಟು ಎಲ್ಲ ಭಾಗಕ್ಕೂ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಿದ್ದೇನೆ ಎಂದು ಭರವಸೆ ನೀಡಿದ್ದಾರೆ.