ದಾವಣಗೆರೆ: ಜಿಲ್ಲೆಯ ಬಲ್ಲೂರು ಗ್ರಾಮದಲ್ಲಿ ಹಾದು ಹೋಗಿರುವ ಕಾಲುವೆಯನ್ನು ಬಂದ್ ಮಾಡಿದ್ದರಿಂದ ಮಳೆಗಾಲದಲ್ಲಿ ಇಡೀ ಗ್ರಾಮದಲ್ಲಿ ನೀರು ಹೊರಹೋಗದೆ ಬಸಿಯುತ್ತಿದೆ. ಇದರಿಂದ ಗ್ರಾಮಸ್ಥರು ಮನೆ ಶಾಲೆ ಎಲ್ಲಿ ಬೀಳುತ್ತೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಳೆ ಹೆಚ್ಚು ಆಗುತ್ತಿರುವ ಕಾರಣ ಕೆಲ ಮನೆಗಳು ನೆಲಕ್ಕುರುಳಿವೆ.
ಬಲ್ಲೂರು, ಜಡಗನಹಳ್ಳಿ, ಶಿರಗಾನಹಳ್ಳಿ ಗ್ರಾಮದಲ್ಲಿ ಮಳೆನೀರು ಬಸಿಯುತ್ತಿರುವುದರಿಂದ ನಮ್ಮ ಕಟ್ಟಡಗಳನ್ನು ಉಳಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಈ ಗ್ರಾಮಗಳು ನೀರಾವರಿ ಪ್ರದೇಶದಿಂದ 9 ರಿಂದ 10 ಅಡಿ ಕೆಳ ಭಾಗದಲ್ಲಿರುವ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
ಈ ಸಮಸ್ಯೆ ಬಗ್ಗೆ ಆರೋಪ ಬಂದ ಬೆನ್ನಲ್ಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಭದ್ರಾ ನೀರಾವರಿ ಅಚ್ಚುಕಟ್ಟಿನ ವ್ಯಾಪ್ತಿಯಲ್ಲಿ ಬರುವ ಬಲ್ಲೂರು ಹಾಗು ಜಡಗನಹಳ್ಳಿ ಸೇರಿದಂತೆ ಶಿರಗಾನಹಳ್ಳಿ ಎರೆ ಮಣ್ಣು (ಕಪ್ಪು) ನಿಂದ ಕೂಡಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.
ಬಲ್ಲೂರು ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ನಾಲೆಯ ಉಪ ನಾಲೆ ಬಂದ್ ಮಾಡಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ನೀರು ಹೋಗದೆ ಈ ಸಮಸ್ಯೆ ಉಲ್ಬಣವಾಗಿದೆ ಎಂದು ಬಲ್ಲೂರು ಗ್ರಾಮದ ಮುಖಂಡ ರವಿಕುಮಾರ್ ಅಳಲು ತೋಡಿಕೊಂಡರು.
ಅಧಿಕಾರಿಗಳ ವಿರುದ್ಧ ಪಿಎಲ್ ಎಚ್ಚರ: ಅಲ್ಲದೆ, 2008 ರಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಗ್ರಾಮವನ್ನು ಸ್ಥಳಾಂತರ ಮಾಡಬೇಕೆಂದು ಹೇಳಿದ್ದರು. ಗ್ರಾಮದಿಂದ ಕಾಲುವೆ ಹತ್ತು ಅಡಿ ಮೇಲಿದ್ದು, ನೀರು ಬಸಿಯಲು ಇದು ಕಾರಣವಾಗಿದೆ. ಗೋಡೆಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಕೆಲ ಮನೆಗಳು ಹಾನಿಯಾಗಿದೆ. ಹೀಗೆ ಮುಂದುವರೆದರೆ ಕರ್ತವ್ಯಲೋಪ ಎಂದು ಅಧಿಕಾರಿಗಳ ವಿರುದ್ಧ ಪಿಎಲ್ ಹಾಕುತ್ತೇವೆ. ಮನೆಗಳು ಶಾಲೆಯ ಗೋಡೆಗಳು ಬಿದ್ದರೆ ಅದಕ್ಕೆ ಸರ್ಕಾರನೇ ಹೊಣೆ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಯಿಂದ ಬೇಸತ್ತಿರುವ ಗ್ರಾಮಸ್ಥರು, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಮೊದಲು ಸರ್ಕಾರ ಇತ್ತ ಗಮನ ಹರಿಸಬೇಕಾಗಿದೆ ಎಂದು ಮನವಿ ಮಾಡುತ್ತಿದ್ದಾರೆ. ಕಾಲುವೆಯನ್ನು ಕೆಲವರು ಒತ್ತುವರಿ ಮಾಡಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರಾದ ಕರಿಬಸಪ್ಪ ದೂರಿದ್ದಾರೆ. ಈ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುವುದರಿಂದ ಜನ ವಸತಿ ಹಾಗು ಜೀವನ ಮಾಡಲು ಭೂಮಿ ಯ್ಯೋಗ್ಯವಲ್ಲ. ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ ಹೊರತು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಕಾಲುವೆಯನ್ನು ಎಲ್ಲರೂ ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಿದರೆ ಎಲ್ಲವೂ ಸರಿ ಹೋಗಲಿದೆ ಎಂದರು.
ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ಮುಂದುವರಿದ ಮಳೆ, ಕೆಲವು ಜಿಲ್ಲೆಗಳಲ್ಲಿ ಮಳೆ ತೀವ್ರತೆ ಕಡಿಮೆ : ಕೃಷಿ ಚಟುವಟಿಕೆ ಚುರುಕು!