ದಾವಣಗೆರೆ: ಡಾ. ಸರೋಜಿನಿ ಮಹಿಷಿ ಯೋಜನೆ ಜಾರಿಗೆ ತರಲು ಆಗ್ರಹಿಸಿ, ದಾವಣಗೆರೆ ಕನ್ನಡಪರ ಸಂಘಟನೆಗಳ ಒಕ್ಕೂಟ ನಗರದಲ್ಲಿ ಬಂದ್ ನಡೆಸದೇ ವಿನೂತನ ಪ್ರತಿಭಟನೆಗೆ ಮುಂದಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕನ್ನಡಪರ ಸಂಘಟನೆಗಳು, ಕರ್ನಾಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೂ, ರಾಜ್ಯ ಸರ್ಕಾರ ಉದ್ಯೋಗದಲ್ಲಿ ಸ್ಥಳೀಯ ಮೀಸಲಾತಿ ಕಾನೂನು ಜಾರಿಗೆ ಇಚ್ಚಾಶಕ್ತಿ ತೋರದ ಪರಿಣಾಮ, ಇಂದು ಕನ್ನಡಿಗರಿಗೆ ಸಿಗಬೇಕಿದ್ದ ಲಕ್ಷಾಂತರ ಉದ್ಯೋಗಗಳು ಹೊರ ರಾಜ್ಯದವರ ಪಾಲಾಗಿವೆ. ಇದರಿಂದ ರಾಜ್ಯದ ಲಕ್ಷಾಂತರ ವಿದ್ಯಾವಂತ ಯುವ ಸಮೂಹ ತಮ್ಮ ಪಾಲಿನ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನಲೆ ಸ್ಥಳೀಯರ ಮೀಸಲಾತಿಗಾಗಿ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ, ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಆದರೆ, ದಾವಣಗೆರೆಯನ್ನು ಬಂದ್ ಮಾಡಿ, ಜನರಿಗೆ ತೊಂದರೆ ಕೊಡದೇ 13 ರಂದು ಬೆಳಿಗ್ಗೆ 11.30ಕ್ಕೆ ಜಯದೇವ ವೃತ್ತದಿಂದ ವಿನೂತನ ಪ್ರತಿಭಟನೆ ಮೂಲಕ ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.