ದಾವಣಗೆರೆ: ಶಿಷ್ಯವೇತನಕ್ಕೆ ಪಟ್ಟು ಹಿಡಿದಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೈಗೊಂಡಿದ್ದು, ಈ ವೇಳೆ ಪೊಲೀಸರು ಮುಷ್ಕರನಿರತರ ನಡುವೆ ಮಾತಿನ ಚಕಮಕಿ ನಡೆದಿದೆ.
ನಗರದ ಜಯದೇವ ವೃತ್ತದಲ್ಲಿ ಕಳೆದ 17 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲು ಡಿಸಿ ಕಚೇರಿಗೆ ತೆರಳಿದಾಗ, ಕಚೇರಿಯಲ್ಲಿ ಡಿಸಿ ಇರಲಿಲ್ಲ. ಎರಡು ಗಂಟೆ ಕಾದರೂ ಕೂಡಾ ಡಿಸಿ ಬರದ ಕಾರಣ ಆಕ್ರೋಶಗೊಂಡ ವೈದ್ಯರು ಹಾಗೂ ವಿದ್ಯಾರ್ಥಿಗಳು ಆವರಣದೊಳಗೆ ಕುಳಿತರು. ಈ ವೇಳೆ ಪೊಲೀಸರು ಇಲ್ಲಿ ಕೂರುವಂತಿಲ್ಲ. ಹೊರಗಡೆ ಪ್ರತಿಭಟನೆ ನಡೆಸಿ ಎಂದು ಹೇಳಿದರೂ ಕೂಡಾ ಪ್ರತಿಭಟನಾಕಾರರು ಬಗ್ಗಲಿಲ್ಲ.
"ಕಳೆದ ಹದಿನಾರು ತಿಂಗಳ ವೇತನ ಸಿಗದೇ ಕಷ್ಟದಲ್ಲಿದ್ದೇವೆ. ಅಷ್ಟೇ ಅಲ್ಲದೆ, ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ನಿಮಗೆ ಒಂದು ತಿಂಗಳ ಸಂಬಳ ಆಗದಿದ್ದರೆ ಸುಮ್ಮನಿರುತ್ತೀರಾ? ನಮ್ಮ ಮೇಲೆ ಯಾಕೆ ನಿಮಗೆ ಇಷ್ಟು ನಿಷ್ಕರುಣೆ. ದಯವಿಟ್ಟು ಪ್ರತಿಭಟನೆ ನಡೆಸಲು ಬಿಡಿ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಡಿಸಿ ಕಚೇರಿ ಗೇಟ್ ಮುಚ್ಚಿ, ಒಳಗಡೆ ಹೆಚ್ಚಿನ ಮಂದಿ ಬರದಂತೆ ತಡೆಯುವ ಪ್ರಯತ್ನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಮಹಾತ್ಮ ಗಾಂಧೀಜಿ ಭಾವಚಿತ್ರ ಹಿಡಿದು “ಫೈಟ್ ಫಾರ್ ಸ್ಟೇ ಫಂಡ್” ಎಂಬ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಆಶಯ ಹೊಂದಿದ್ದ ವಿದ್ಯಾರ್ಥಿಗಳಿಗೆ ನಿರಾಸೆ ಆಗಿದೆ. ಸಿಎಂ ಯಡಿಯೂರಪ್ಪ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಗೆ ಬಿಕ್ಕಟ್ಟು ಬಗೆಹರಿಸುವಂತೆ ಸೂಚಿಸಿದ್ದರು. ಡಿಸಿ ಮಹಾಂತೇಶ್ ಆರ್. ಬೀಳಗಿ ಅವರಿಗೆ ವಿಡಿಯೋ ಸಂವಾದದ ವೇಳೆ ಈ ಸಮಸ್ಯೆ ಬಗೆಹರಿಸುವಂತೆಯೂ ಹೇಳಲಾಗಿತ್ತು. ಆದ್ರೆ ಸಮಸ್ಯೆ ಬಗೆಹರೆಯದ ಕಾರಣ ವೈದ್ಯ ವಿದ್ಯಾರ್ಥಿಗಳು ಕಿಡಿಕಾರಿದರು.