ಹರಿಹರ: ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಮಾಣಿಕ ಅಧಿಕಾರಿಗಳು,ಹೋರಾಟಗಾರರು, ಪತ್ರಕರ್ತರು ಹಾಗೂ ಸಮಾಜ ಸೇವಕರುಗಳಿಗೆ ನೀಡುವ ಅಡೆತಡೆಗಳ ನಿವಾರಣೆಗೆ ಒಂದು ಸಮಿತಿಯ ಅವಶ್ಯಕತೆ ಇದೆ ಎಂದು ಹಿರಿಯ ಕಾರ್ಮಿಕ ಮುಖಂಡ ಹೆಚ್.ಕೆ.ಕೊಟ್ರಪ್ಪ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಸೇರಿದ್ದ ಪ್ರಗತಿಪರ ಚಿಂತಕರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಹೆಚ್ಚಾಗಿ ಪ್ರಾಮಾಣಿಕ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಮಾಜ ಸೇವಕರುಗಳಿಗೆ ಕೆಲ ವ್ಯಕ್ತಿಗಳು ಸಂಘ-ಸಂಸ್ಥೆಗಳು ನೀಡುವ ಕಿರುಕುಳ ತಡೆಯುವಲ್ಲಿ ಪ್ರಗತಿಪರರಾದ ನಾವುಗಳೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇಂತಹ ಅಡ್ಡಿ-ಆತಂಕಗಳು ಪದೇಪದೇ ಮರುಕಳಿಸುತ್ತಿದ್ದು, ಕೆಲವು ವ್ಯಕ್ತಿಗಳು ಅನಾವಶ್ಯಕವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಕೆಲವು ಪ್ರಾಮಾಣಿಕ ಅಧಿಕಾರಿಗಳು ಹಿಂದೇಟು ಹಾಕುವ ಸನ್ನಿವೇಶ ಸೃಷ್ಟಿಯಾಗಿದೆ.ಈ ಕಾರಣಕ್ಕಾಗಿ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ಪ್ರಗತಿಪರ ಚಿಂತಕರುಗಳಾದ ನಾವೆಲ್ಲರೂ ಒಗ್ಗೂಡಿ ಒಂದು ಸಮಿತಿಯನ್ನು ಕಟ್ಟಿ ಇಂತಹವರ ವಿರುದ್ಧ ಕ್ರಮಕೈಗೊಳ್ಳುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ನಂತರ ಸಭೆಯಲ್ಲಿದ್ದ ಎಲ್ಲ ಪ್ರಗತಿಪರ ಚಿಂತಕರುಗಳು ಚರ್ಚಿಸಿ ಸಾಧಕ-ಬಾದಕಗಳನ್ನು ನೋಡಿಕೊಂಡು ಸೆಪ್ಟೆಂಬರ್ 2ರಂದು ಮತ್ತೊಮ್ಮೆ ಸಭೆ ಸೇರಿ ಚಿಂತನೆ ನಡೆಸಿ ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ತೀರ್ಮಾನ ತೆಗೆದು ಕೊಳ್ಳಲಾಯಿತು.
ಸಭೆಯಲ್ಲಿ ಸಾಹಿತಿ ಜೆ.ಎಂ.ಕಲೀಮ್ ಭಾಷಾ, ಪರಿಸರ ಪ್ರೇಮಿ ರಾಘವೇಂದ್ರ, ಬಿ.ಬಿ.ರೇವಣಿ ನಾಯಕ್, ವಿಜಯಮಹಾಂತೇಶ್, ಹೆಚ್.ಎಸ್. ಕೊಟ್ರೇಶ್, ಹೆಚ್.ನಿಜಗುಣ, ರಿಯಾಜ್ ಅಹ್ಮದ್, ಎಕ್ಕೆಗೊಂದಿ ಎಚ್.ಬಿ.ರುದ್ರೇಗೌಡ, ಅಲ್ಲದೆ ಅನೇಕ ಪ್ರಗತಿಪರರು ಹಾಜರಿದ್ದರು.