ದಾವಣಗೆರೆ: ಬೆಣ್ಣೆನಗರಿಯಲ್ಲಿ ಸರ್ಕಾರಿ ಮಡಿಕಲ್ ಕಾಲೇಜು ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಕೇವಲ ಖಾಸಗಿ ವಲಯದಲ್ಲಿ ಶಾಲಾ ಕಾಲೇಜುಗಳು ಪ್ರಖ್ಯಾತಿ ಹೊಂದಿರುವ ನಗರದಲ್ಲೀಗ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬೇಕು ಎಂದು ಜನಪ್ರತಿನಿಧಿಗಳು ಪಣತೊಟ್ಟಿದ್ದಾರೆ.
ಕೇವಲ ಮಾಜಿ ಸಚಿವ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಮೂರು ಮೆಡಿಕಲ್ ಕಾಲೇಜುಗಳು ಮಾತ್ರ ಜಿಲ್ಲೆಯಲ್ಲಿವೆ. ಹಾಗಾಗಿ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಆಗಬೇಕೆನ್ನುವ ವಿಚಾರ ಮುನ್ನಲೆಗೆ ಬಂದಿದೆ.
ರಾಜ್ಯ ಸರ್ಕಾರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮೆಡಿಕಲ್ ಕಾಲೇಜಿನ ಶಂಕು ಸ್ಥಾಪನೆ ಮಾಡಿ ಜಿಲ್ಲೆಯ ಜನತೆಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜು, ಎಸ್ಎಸ್ ಮೆಡಿಕಲ್ ಕಾಲೇಜು ಹಾಗೂ ಡೆಂಟಲ್ ಮೆಡಿಕಲ್ ಕಾಲೇಜು ಸೇರಿ ಮೂರು ಖಾಸಗಿ ಮೆಡಿಕಲ್ ಕಾಲೇಜುಗಳು ಇದ್ದು, ಈ ಮೂರು ಕಾಲೇಜುಗಳು ಶಾಸಕ ಶಾಮನೂರು ಶಿವಶಂಕರಪ್ಪನವರ ಒಡೆತನದಲ್ಲಿವೆ. ರಾಜಕೀಯ ವೈರಿಗಳಾದ ಸಂಸದ ಜಿ.ಎಂ ಸಿದ್ದೇಶ್ವರ್ ಹಾಗೂ ಬಿಜೆಪಿ ಮುಖಂಡರು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ತರಬೇಕು ಎಂದು ಹಠ ಹಿಡಿದಿದ್ದಾರೆ. ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಜಿಲ್ಲಾ ಪ್ರವಾಸ ಮಾಡುವ ವೇಳೆ ಜನರಿಗೆ ಒಂದು ಖುಷಿ ಸುದ್ದಿ ತಿಳಿಸಲಿದ್ದಾರೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯನಗರ ಜಿಲ್ಲೆಗೆ ತಾತ್ಕಾಲಿಕ 21 ಹುದ್ದೆಗಳನ್ನು ಸೃಷ್ಟಿಸಿ ಸರ್ಕಾರ ಆದೇಶ
ಒಂದುಕಡೆ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಠಕ್ಕರ್ ನೀಡುವ ನಿಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ತರಲೇಬೇಕು ಎಂದು ಪಣ ತೊಟ್ಟಿದ್ದಾರೆನ್ನುವ ಮಾತುಗಳು ಕೇಳಿಬಂದಿವೆ. ಆದ್ರೆ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸ್ವಾಗತ ಮಾಡಿದ್ದು, ಜಿಲ್ಲೆಯಲ್ಲಿ ಯಾವಾಗ ಮೆಡಿಕಲ್ ಕಾಲೇಜು ನಿರ್ಮಾಣ ಆಗುತ್ತದೆ ಎಂದು ಇಡೀ ಜಿಲ್ಲೆಯ ಜನ ಕಾತರದಿಂದ ಕಾಯುತ್ತಿದ್ದಾರೆ.