ದಾವಣಗೆರೆ: ಕಂಟೈನ್ಮೆಂಟ್ ಝೋನ್ಗಳ ನಿವಾಸಿಗಳು ಬಹಳ ಕಷ್ಟ ಅನುಭವಿಸುತ್ತಿದ್ದು, ಮನೆಯಿಂದ ಹೊರಗೆ ಬರಲು ಆಗುತ್ತಿಲ್ಲ. ಈ ಬಗ್ಗೆ ಗಮನಹರಿಸದ ಜಿಲ್ಲಾಡಳಿತವು ಕಷ್ಟಕ್ಕೆ ಸ್ಪಂದಿಸುವ ಗೋಜಿಗೂ ಹೋಗಿಲ್ಲ ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣ ಜಾಲಿನಗರ, ಬಾಷಾನಗರ, ಇಮಾಮ್ ನಗರ, ಬಸವರಾಜಪೇಟೆ ಸೇರಿದಂತೆ ಹಲವೆಡೆ ಕಂಟೈನ್ಮೆಂಟ್ ಝೋನ್ಗಳನ್ನು ಮಾಡಲಾಗಿದೆ. 100 ಅಡಿ ಝೋನ್ ಮಾಡಿದ್ದರೂ ಅಕ್ಕಪಕ್ಕದಲ್ಲಿಯೇ ಚಿಕ್ಕದಾಗಿ ಮನೆ ಕಟ್ಟಿಕೊಂಡಿರುವ ಸುಮಾರು 70 ಮನೆಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿನ ಜನರಿಗೆ ಸೌಲಭ್ಯ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಕಂಟೈನ್ಮೆಂಟ್ ಝೋನ್ಗಳಲ್ಲಿ ಬಿಗಿಯಾದ ಕ್ರಮ ಕೈಗೊಳ್ಳಲಿ, ಅದಕ್ಕೆ ಅಭ್ಯಂತರವೇನೂ ಇಲ್ಲ. ಆದರೆ ಬಡವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶಗಳ ಜನರಿಗೆ ಜಿಲ್ಲಾಡಳಿತ ಆಹಾರದ ಕಿಟ್ಗಳನ್ನು ನೀಡಬೇಕು. ಈ ಕೆಲಸ ಆಗಿಲ್ಲ. ಕಾರ್ಪೊರೇಟರ್ಗಳು ಹೋದರೆ ಜನರು ವಿಷದ ಬಾಟಲ್ ಕೊಡಿ ಕುಡಿಯುತ್ತೇವೆ. ಇಂಥ ನರಕದ ಬದುಕು ಬೇಡ ಎನ್ನುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ಬಡವರಿಗೆ ಆಹಾರದ ಕಿಟ್ಗಳನ್ನು ನೀಡಲು ವಿನಿಯೋಗಿಸಲಿ ಎಂದು ನಾಗರಾಜ್ ಆಗ್ರಹಿಸಿದರು.