ದಾವಣಗೆರೆ: ಮಾಸ್ಕ್ ಧರಿಸದ ಪೊಲೀಸ್ ಕಾನ್ಸ್ಟೇಬಲ್ಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ದಂಡ ವಿಧಿಸಿದ ಘಟನೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ನಡೆದಿದೆ.
ಪಾಲಿಕೆ ಮುಂಭಾಗ ಮಾಸ್ಕ್ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪಾಲಿಕೆಯ ಮೇಯರ್ ಅಜಯ್ ಕುಮಾರ್ ಚಾಲನೆ ನೀಡಿದರು. ಬಳಿಕ ವಾಹನ ಸವಾರರು ಮತ್ತು ಜನರಿಗೆ ಡಿಸಿಯವರೇ ಸ್ವತಃ ಮಾಸ್ಕ್ ವಿತರಿಸಿ ಎಲ್ಲರೂ ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಿದರು.
ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಮಾಸ್ಕ್ ಧರಿಸದ ಕಾರಣ 200 ರೂಪಾಯಿ ದಂಡ ವಿಧಿಸಿದರು. ಈ ವೇಳೆ ಸ್ಥಳದಲ್ಲಿದ್ದ ಎಸ್ಪಿ ಹನುಮಂತರಾಯ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಮಹಾಂತೇಶ್ ಆರ್. ಬೀಳಗಿ, ಪ್ರತಿಯೊಬ್ಬರೂ ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.