ದಾವಣಗೆರೆ: ತೆರಿಗೆ ಪಾವತಿಸದೇ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚರಿಸುತ್ತಿದ್ದ ಎರಡು ರಾಯಲ್ ಎನ್ಫೀಲ್ಡ್ ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ದಕ್ಷಿಣ ಸಂಚಾರ ಠಾಣೆಯ ಪಿಎಸ್ಐ ಶೈಲಜಾ ಅವರು ವಾಹನ ತಪಾಸಣೆ ನಡೆಸುವಾಗ ತೆರಿಗೆ ವಂಚಿಸಲು ಬೈಕ್ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವುದು ಪತ್ತೆಯಾಗಿದೆ.
ಪವನ್ ಎಂಬುವವರು ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಬರುವಾಗ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ಇನ್ನು ಉಮೇಶ್ ಎಂಬುವರು ಕೂಡ ಸ್ಕೂಟರ್ ನಂಬರ್ ಪ್ಲೇಟ್ನ್ನು ಇದೇ ರೀತಿ ಬೇರೆ ಸಂಖ್ಯೆ ಬಳಸಿದ್ದರು. ಅದೇ ರೀತಿ ಹರಿಹರ ಮಹಮ್ಮದ್ ಆಸೀಫ್ ಆಲಿ ಎಂಬುವರು ಸಹ ಇದೇ ರೀತಿಯ ಮಾಡಿರುವುದು ಬೆಳಕಿಗೆ ಬಂದಿದೆ. ವಾಹನ ನೋಂದಣಿ ಮಾಡಿಸದೆ ತೆರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೈಕ್ ನೋಂದಣಿ ಮಾಡಿಸದೇ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸಂಚರಿಸುತ್ತಿದ್ದು ಕಂಡು ಬಂದರೆ ಪ್ರಕರಣ ದಾಖಲಿಸುವ ಜೊತೆಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.