ದಾವಣಗೆರೆ: ಸಚಿವ ಸೋಮಣ್ಣ ಸಚಿವನಾಗಲು ನಾಲಾಯಕ್, ಮಹಿಳೆ ಮೇಲೆ ಕೈ ಮಾಡಿದ್ದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ನಗರದಲ್ಲಿಂದು ಹೃದಯಾಘಾತದಿಂದ ನಿಧನರಾದ ತಮ್ಮ ಆಪ್ತ ಹಾಗೂ ಕುರುಬ ಸಮಾಜದ ಮುಖಂಡ ಪಿ ರಾಜಕುಮಾರ್ ಅವರ ಅಂತಿಮ ದರ್ಶನಕ್ಕಾಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಪ ಹಕ್ಕು ಪತ್ರಕ್ಕಾಗಿ ಬಂದ ಮಹಿಳೆಗೆ ಹೊಡೆದಿದ್ದಾರೆ. ಸಚಿವರು ಎಂದು ಜನರು ಅವರ ಕಷ್ಟ ಹೇಳಿಕೊಳ್ಳಲು ಬರ್ತಾರೆ. ಆದ್ರೆ ಮಹಿಳೆ ಮೇಲೆ ಕೈ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದರಿಂದ ಬಿಜೆಪಿ ಸಂಸ್ಕೃತಿ ತಿಳಿದು ಬರುತ್ತೆ. ಒಬ್ಬ ಮಂತ್ರಿಗೆ ಅಧಿಕಾರ ಕೊಟ್ಟಿರೋದು ಮಹಿಳೆ ಮೇಲೆ ದಲಿತರ ಮೇಲೆ ಕೈ ಮಾಡಲಿಕ್ಕಾ, ಅಂತವರೆಲ್ಲ ಮಂತ್ರಿ ಮಂಡಲದಲ್ಲಿ ಇರಬಾರದು. ತಾಳ್ಮೆ, ಸಹನೆ, ಜನರ ಕಷ್ಟ ಕೇಳೋಕೆ ಆಗದಿದ್ದಕ್ಕೆ ಮಂತ್ರಿ ಯಾಕೆ ಆಗಬೇಕು. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ರಾಜೀನಾಮೆಗೆ ಒತ್ತಾಯಿಸಿದರು.
ಸಚಿವ ಸೋಮಣ್ಣ ಕ್ಷಮೆಯಾಚನೆ: ತಮ್ಮ ವಿರುದ್ಧ ಕೇಳಿಬಂದಿರುವ ಮಹಿಳೆ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಚಾಮರಾಜನಗರದಲ್ಲಿ ಮಾತನಾಡಿರುವ ವಸತಿ ಸಚಿವ ವಿ. ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಸ್ಪಷ್ಟನೆಯನ್ನು ನೀಡಿದ್ದು, ಆ ಸಂಧರ್ಭದಲ್ಲಿ ಮಹಿಳೆಯನ್ನು ಕೈಯಿಂದ ಪಕ್ಕಕ್ಕೆ ಸರಿಸಿದ್ದೇನೆಯೇ ಹೊರತು, ಕಪಾಳಮೋಕ್ಷ ಮಾಡಿಲ್ಲ. ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಹಗರಣ ತನಿಖೆ : ಕಳೆದ ಸರ್ಕಾರದಲ್ಲಿ ನಡೆದಿವೆ ಎನ್ನಲಾದ ಹಗರಣಗಳ ಬಗ್ಗೆ ತನಿಖೆ ಮಾಡಲು ನಮಗೆ ಯಾವುದೇ ಅಭ್ಯಂತರ ಇಲ್ಲ. ಇಷ್ಟು ವರ್ಷ ಏನ್ ಮಾಡಿದ್ರು, ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ, ನಾವು 40% ಅಂತ ಹೇಳಿದ್ದಕ್ಕೆ ಈಗ ಅವರು ಈಗ ತನಿಖೆ ಅಂತಿದ್ದಾರೆ. ಐದು ವರ್ಷ ವಿರೋಧ ಪಕ್ಷದಲ್ಲಿದ್ದಾಗ ಬಾಯಿಗೆ ಬೀಗ ಹಾಕಿಕೊಂಡಿದ್ರಾ, ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರು. ಮೂರು ವರ್ಷ ಸುಮ್ಮನಿದ್ದು, ಈಗ ತನಿಖೆ ಮಾಡ್ತಾರಂತೆ. ಮಾಡಿ, ಜೊತೆಗೆ ನಿಮ್ಮದು 40% ವಸೂಲಿ ಕುರಿತು ತನಿಖೆ ಮಾಡಿಕೊಳ್ಳಿ ಎಂದು ಟಾಂಗ್ ನೀಡಿದರು.
ಭಾರತ್ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ: ಭಾರತ್ ಜೋಡೋ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 20 ದಿನ ಪಾದಯಾತ್ರೆ ಮಾಡಿದ್ದೆವು. ಗುಂಡ್ಲುಪೇಟೆಯಿಂದ ರಾಯಚೂರುವರೆಗೂ ಯಶಸ್ವಿಯಾಗಿ ಯಾತ್ರೆ ನಡೆದಿದೆ. ಇದರಲ್ಲಿ ಒಂದು ಲಕ್ಷ ಜನರು ಭಾಗವಹಿಸಿದ್ದರು. ಜನರ ಸ್ಪಂದನೆ ತುಂಬಾ ಇದೆ. ಜನರಿಗೆ ಬಿಜೆಪಿ ಸರ್ಕಾರ ಬೇಡವಾಗಿದೆ. ಆದ್ದರಿಂದ ಭಾರತ್ ಜೋಡೋ ಯಾತ್ರೆಗೆ ಇಷ್ಟು ಸ್ಪಂದನೆ ಇದೆ ಎಂದರು.
ಸರ್ಕಾರಿ ಶಾಲಾ ಮಕ್ಕಳ ಬಳಿ 100 ರೂಪಾಯಿ ವಸೂಲಿ ಆದೇಶ: ಸರ್ಕಾರಿ ಶಾಲಾ ಮಕ್ಕಳ ಬಳಿ 100 ರೂಪಾಯಿ ವಸೂಲಿಗಿಳಿದಿದೆ. ಸರ್ಕಾರಿ ಶಾಲೆಯಲ್ಲಿ ಓದುವವರು ಬಡವರ ಮಕ್ಕಳು, ಅವರಿಗೆ ತಿಂಗಳಿಗೆ ನೂರು ರೂಪಾಯಿ ವಸೂಲಿ ಮಾಡುವುದು ಎಂದರೆ ಏನ್ ಹೇಳಿ, ನಾವು ಉಚಿತವಾಗಿ ಹಾಲು ಬಿಸಿಯೂಟ, ಶೂ ಸೇರಿದಂತೆ ಬಡ ಮಕ್ಕಳಿಗೆ ನೀಡಿದ್ದೇವೆ. ಆದರೆ, ಬಿಜೆಪಿ ಸರ್ಕಾರ ಬಡ ಮಕ್ಕಳ ಬಳಿ ವಸೂಲಿ ಮಾಡುತ್ತಿದ್ದಾರೆ. ಪೋಷಕರಿಗೆ ಅಷ್ಟೊಂದು ದುಡ್ಡು ಎಲ್ಲಿ ತರ್ತಾರೆ, ನಾವು ಹಾಗೂ ಪೋಷಕರು ಒತ್ತಾಯ ಮಾಡಿದ ಮೇಲೆ ಆದೇಶ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಆದ್ರೆ ಸರ್ಕಾರ ಆದೇಶದ ಹೊರಡಿಸಿದ ಎರಡೇ ದಿನದಲ್ಲಿ ಜನರು ಮತ್ತು ಪ್ರತಿಪಕ್ಷಗಳ ವಿರೋಧದಿಂದ ಎಚ್ಚೆತ್ತುಕೊಂಡು ಆದೇಶವನ್ನು ಶನಿವಾರ ಸಂಜೆಯೇ ಹಿಂಪಡೆದಿದೆ.