ದಾವಣಗೆರೆ: ದೀಪಾವಳಿ ಬೆಳಕಿನ ಹಬ್ಬ. ಆದರೆ, ಈ ಬೆಳಕಿನ ಹಬ್ಬದಲ್ಲಿ ಸಾಕಷ್ಟು ಜನ ಪಟಾಕಿ ಹೊಡೆಯುವ ಸಾಹಸಕ್ಕೆ ಕೈ ಹಾಕಿ ತಮ್ಮ ಬದುಕು ಕತ್ತಲಾಗಿಸಿಕೊಂಡಿದ್ದಾರೆ. ಪಟಾಕಿ ಸಿಡಿದರೆ ಕಣ್ಣಿಗಾಗುವ ಹಾನಿ ಹಾಗೂ ಪಟಾಕಿ ಹೊಡೆಯುವ ಮುನ್ನ ಮುಖ್ಯವಾಗಿ ಮಕ್ಕಳು ಯುವಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂದು ನೇತ್ರತಜ್ಞ ರವೀಂದ್ರನಾಥ್ ಮಾಹಿತಿ ಕೊಟ್ಟಿದ್ದಾರೆ.
ದೀಪಗಳ ಹಬ್ಬ ದೀಪಾವಳಿ. ಬೆಳಕಿನ ಹಬ್ಬದಲ್ಲಿ ಪಟಾಕಿ ಹೊಡೆದು ಸಂಭ್ರಮಿಸುವುದು ಯಾವ ಹಬ್ಬಗಳಲ್ಲೂ ಇಲ್ಲದ ವಿಶೇಷತೆ ಈ ಹಬ್ಬದಲ್ಲಿದೆ. ಹಬ್ಬದಲ್ಲಿ ಸಿಡಿಸುವ ಪಟಾಕಿಗಳು ಕ್ಷಣ ಮಾತ್ರ ಖುಷಿ ಕೊಡುತ್ತದೆ. ಆದರೆ, ಏನಾದರೂ ಹೆಚ್ಚು ಕಡಿಮೆ ಆದರೆ, ತಮ್ಮ ಬದುಕೇ ಕತ್ತಲಾಗುವ ಸಂಭವ ಹೆಚ್ಚಿದೆ. ಇನ್ನು ಈ ಪಟಾಕಿ ಬಳಕೆ ಮಾಡುವುದರಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಕಟ್ಟಿಟ್ಟ ಬುತ್ತಿ. ಸರ್ಕಾರ ಈ ಪಟಾಕಿಗಳನ್ನು ಬಳಕೆ ಮಾಡಬೇಡಿ ಎಂದು ಹೇಳಿಸಿದರೂ ಜನ ಮಾತ್ರ ಪರಿಸರ ಹಾನಿ ಮಾಡುವ ಪಟಾಕಿ ಹೊಡೆದು ಸಂಭ್ರಮಿಸುವುದು ಮಾತ್ರ ಕಡಿಮೆಯಾಗಿಲ್ಲ.
ನೇತ್ರ ತಜ್ಞ ಡಾ. ರವೀಂದ್ರನಾಥ್ ಮಾತು: ಪಟಾಕಿಗಳು ಸಿಡಿಸುವುದರಿಂದ ಆ ಕ್ಷಣಕ್ಕೆ ಮಾತ್ರ ಖುಷಿ ಸಿಗುತ್ತದೆ. ಪಟಾಕಿಯಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಅದರಲ್ಲೂ ಪಟಾಕಿಯಿಂದ ಕಣ್ಣಿಗೆ ಹಾನಿ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಕಳೆದ ಬಾರಿ ಕಣ್ಣಿಗೆ ಹಾನಿಯಾಗಿರುವುದು ಕಡಿಮೆ. ಸ್ವಲ್ಪ ಮಟ್ಟಿಗೆ ಜನ ಪಟಾಕಿಗಳಿಂದ ಹುಷಾರಾಗಿದ್ದಾರೆ ಅನಿಸುತ್ತದೆ. ಅದರಲ್ಲೂ ದಾವಣಗೆರೆಯಲ್ಲಿ ಈ ಪಟಾಕಿಯಿಂದ ಕಣ್ಣಿಗೆ ಹಾನಿಗೊಳದವರು ಹೆಚ್ಚಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಜನರ ಕಣ್ಣುಗಳಿಗೆ ಕೊಂಚ ಕಡಿಮೆ ಹಾನಿಯಾಗಿದೆ. ದಾವಣಗೆರೆಯಲ್ಲಿ ಕಳೆದ ಬಾರಿ ಹದಿನೈದು ಜನರ ಕಣ್ಣುಗಳಿಗೆ ಪಟಾಕಿಯಿಂದ ಹಾನಿಯಾಗಿತ್ತು.
ಹದಿನೈದು ಜನರ ಪೈಕಿ ಮೂರು ಜನರ ಕಣ್ಣುಗಳಿಗೆ ಗಂಭೀರವಾಗಿ ಹಾನಿಯಾಗಿ ದೃಷ್ಟಿ ಕಳೆದುಕೊಂಡಿದ್ದರು. ಇನ್ನು ಉಳಿದ 12 ಜನರಿಗೆ ಮೈನರ್ ಗಾಯಗಳಾಗಿತ್ತು. ಇದರಲ್ಲಿ ಬಹುತೇಕ ಮಕ್ಕಳೇ ಪಟಾಕಿಯಿಂದ ಕಣ್ಣು ಹಾನಿ ಮಾಡಿಕೊಂಡಿದ್ದರು. ಪಟಾಕಿ ಹೊಡೆಯುವ ವೇಳೆ ಮುಂಜಾಗ್ರತಾ ಕ್ರಮವಹಿಸಿ, ಹಸಿರು ಪಟಾಕಿ, ಪರಿಸರ ಸ್ನೇಹಿ ಪಟಾಕಿಗಳನ್ನು ಉಪಯೋಗಿಸಿ, ಭಾರಿ ಶಬ್ದ ಮಾಡುವ ಪಟಾಕಿಗಳನ್ನು ಸಾರ್ವಜನಿಕರು ಬಳಕೆ ಮಾಡಬೇಡಿ ಮಕ್ಕಳಿಗೂ ಕೊಡಬೇಡಿ. ಪಟಾಕಿ ಹೊಡೆಯುವ ವೇಳೆ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದು ಒಳ್ಳೆಯದು, ಇನ್ನು ಸುರಕ್ಷಿತ ಕನ್ನಡಕ ಧರಿಸಿ ಪಟಾಕಿ ಹೊಡೆಯುವುದು ಉತ್ತಮ ಎಂದರು.
ಪಟಾಕಿ ಸಿಡಿಸಿದ ಬಳಿಕ ಕಣ್ಣಿಗೆ ಹೇಗೆ ಹಾನಿ ಆಗುತ್ತದೆ?: ಪಟಾಕಿ ಹೊಡೆಯುವುದರಿಂದ ಕಣ್ಣಿಗೆ ಬಹಳ ಗಂಭೀರವಾದ ಹಾನಿಯಾಗಲಿದೆ. ಪಟಾಕಿಯ ಚೂರುಗಳು ವೇಗವಾಗಿ ಬಂದು ಕಣ್ಣಿಗೆ ತಾಗಿದಾಗ ಕಣ್ಣು ಪೂರ್ತಿ ಸೀಳಿ ಹೋಗಬಹುದು. ಕರಿ ಬಣ್ಣದ ಗುಡ್ಡೆ ಚೂರಾಗಬಹುದು. ಕಣ್ಣಿನಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ದಟ್ಟವಾಗಿರುತ್ತದೆ. ಇದಲ್ಲದೆ ಕಣ್ಣಿನ ಒಳಗೆ ಇರುವ ಸೂಕ್ಷ್ಮವಾದ ಚಿಕ್ಕ ಚಿಕ್ಕ ನರಗಳಿಗೆ ಹಾಗೂ ಅಕ್ಷಯಪಟಲಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಪಟಾಕಿಯಿಂದ ಸಪೂರ್ಣ ಕಣ್ಣು ಕೂಡ ಹಾನಿಯಾಗಬಹುದು. ಪಟಾಕಿಯಿಂದ ಮೂರು ಜನರಿಗೆ ಸಂಪೂರ್ಣ ದೃಷ್ಟಿ ಹೋಗಿರುವುದನ್ನು ನೋಡಿದ್ದೇನೆ. ಆದ್ದರಿಂದ ಪಟಾಕಿ ಹಚ್ಚುವ ವೇಳೆ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕಣ್ಣಿನ ತಜ್ಞ ಡಾ. ರವೀಂದ್ರನಾಥ್ ಮಕ್ಕಳಿಗೆ ಹಾಗು ಜನಸಾಮಾನ್ಯರಿಗೆ ಎಚ್ಚೆರಿಕೆ ನೀಡಿದ್ದಾರೆ. ಜೊತೆಗೆ ಪಟಾಕಿ ಹೊಡೆಯುವ ವೇಲೆ ಸುರಕ್ಷಿತ ಕನ್ನಡಕ ಧರಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕುಂದಾನಗರಿಯಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹಸಿರು ಪಟಾಕಿ ಬಳಸುವಂತೆ ಡಿಸಿ ಖಡಕ್ ಎಚ್ಚರಿಕೆ