ದಾವಣಗೆರೆ: ಆಪರೇಷನ್ ಕಮಲ ಆಗುತ್ತೆ ಅನ್ನೋದು ಮೂರ್ಖತನದ ಪರಮಾವಧಿ, ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಗಿಮಿಕ್ ಮಾಡ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಯಾರೂ ಬೀಳಿಸಲ್ಲ. ಆದ್ರೆ ಅವರಾಗೇ ಅವರ ಸರ್ಕಾರ ಬೀಳಿಸಿಕೊಳ್ತಾರೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ, ಬಿ ಕೆ ಹರಿಪ್ರಸಾದ್, ಶಾಮನೂರು ಶಿವಶಂಕರಪ್ಪ, ರಾಯರೆಡ್ಡಿ ಅವರೇ ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿದ್ದಾರೆ. ಸಿದ್ದರಾಮಯ್ಯ ಗುಂಪು ಒಂದ್ ಕಡೆ ಸಭೆ ಮಾಡುತ್ತಿದೆ. ಇತ್ತ ಡಿಕೆಶಿ ಗುಂಪು ಮತ್ತೊಂದು ಕಡೆ ಸಭೆ ಮಾಡ್ತಾ ಇದೆ. ಡಿಕೆಶಿ-ಸಿದ್ದರಾಮಯ್ಯ ಸಿಎಂ ಗಾದಿಗೆ ಕಿತ್ತಾಡುತ್ತಿದ್ದಾರೆ. ಸರ್ಕಾರದಿಂದ ಅಭಿವೃದ್ಧಿ ಶೂನ್ಯ, ಅದನ್ನು ಮರೆಮಾಚಲು ಆಪರೇಷನ್ ಕಮಲ, ಹುಲಿ ಉಗುರು ಅಂತ ನಾಟಕ ಮಾಡ್ತಿದ್ದಾರೆ ಎಂದರು.
ಅಪರೇಷನ್ ಕಮಲ ಮಾಡಬೇಕು ಅಂದರೆ 90 ಜನ ಎಂಎಲ್ಎಗಳನ್ನು ಕರೆತರಬೇಕು. ಅವರಿಗೆ ಯಾರು ದುಡ್ಡು ಕೊಟ್ಟು ಕರೆದುಕೊಂಡು ಬರ್ತಾರೆ, ಬಿಜೆಪಿಯಲ್ಲಿ ಯಾರೂ ಸಿಎಂ ಆಗಬೇಕು ಅಂತ ಪ್ರಯತ್ನ ಪಡುತ್ತಿಲ್ಲ. 3 ಸಾವಿರ ಕೋಟಿ ಬಂಡವಾಳ ಹಾಕಿ ಬಿಜೆಪಿಯಲ್ಲಿ ಯಾರೂ ಸಿಎಂ ಆಗಬೇಕು ಅಂತ ಇಲ್ಲ. ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಭಾಗ್ಯಗಳಿಗೆ 65- 70 ಸಾವಿರ ಕೋಟಿ ಸಾಲ ಮಾಡ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಅನ್ನೋದು ಶೂನ್ಯವಾಗಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಅವರೇ ಕಿತ್ತಾಡಿಕೊಂಡು ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಬಿ ಅಇ ಪಾಟೀಲ್ ವಾಗ್ದಾಳಿ ನಡೆಸಿದರು.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಖಚಿತ: ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ಟರೂ ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ. ಯಾರಿಗೆ, ಯಾವುದೇ ಜಾತಿಯವರಿಗೆ ಟಿಕೆಟ್ ಕೊಟ್ಟರೂ ನಾನು ಸಪೋರ್ಟ್ ಮಾಡುತ್ತೇನೆ. ಆದರೆ, ಹಾವೇರಿ- ಗದಗ ಜಿಲ್ಲೆಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಪರೋಕ್ಷವಾಗಿ ಕೆ ಎಸ್ ಈಶ್ವರಪ್ಪ ಪುತ್ರನ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು. ಈಶ್ವರಪ್ಪ ಪುತ್ರ ಕಾಂತೇಶ್ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಶ್ವರಪ್ಪ ಅವರ ಪುತ್ರ ಕೆ ಎಸ್ ಕಾಂತೇಶ್ ಹಾವೇರಿಗೆ ಬಂದರೆ ಗೆಲ್ಲೋದು ಕಷ್ಟ ಎಂಬ ಲೆಕ್ಕಾಚಾರ ಮಾಜಿ ಸಚಿವ ಬಿ ಸಿ ಪಾಟೀಲ್ ಅವರದ್ದಾಗಿದೆ.
ಇದನ್ನೂ ಓದಿ : ಆಪರೇಷನ್ ಕಮಲದ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ: ಸಚಿವ ಡಾ ಪರಮೇಶ್ವರ್