ದಾವಣಗೆರೆ : ವಿವಿಧ ವಂಚನೆ ಪ್ರಕರಣಗಳಲ್ಲಿ ಐದು ಜನ ಸಾವಿರಾರು ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಧಿಕಾರಿ ಸೋಗಿನಲ್ಲಿ ಸಾಲ ನೀಡುವುದಾಗಿ ವ್ಯಕ್ತಿಯೋರ್ವನಿಗೆ 72,500 ರೂ. ಹಣವನ್ನು ಆನ್‌ಲೈನ್ ಮೂಲಕ ವಂಚನೆ ಮಾಡಲಾಗಿದೆ. ಇದರ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಣಕುಪ್ಪೆ ಗ್ರಾಮದ ನಿವಾಸಿ ಲೋಕೇಶ್ ವಂಚನೆಗೊಳಗಾದ ವ್ಯಕ್ತಿ. ನವೆಂಬರ್ 20ರಂದು ಲೋಕೇಶ್ ಅವರಿಗೆ ಕ್ಯೂಪಿ ಇಎನ್ವಿಎಂಎನ್ಟಿಯಿಂದ ಮೊಬೈಲ್ಗೆ ಸಂದೇಶ ಬಂದಿದೆ.
ಡಿ.16ರಂದು ವಂಚಕನಿಗೆ ಕರೆ ಮಾಡಿ ಅವನು ಹೇಳಿದ್ದಂತೆ ವಾಟ್ಸ್‌ಆ್ಯಪ್ ಕ್ಯೂಆರ್ ಕೋಡ್‌ಗೆ ಸ್ಕ್ಯಾನ್ ಮಾಡಿ ಹಂತ ಹಂತವಾಗಿ 72,500 ರೂ. ಹಣ ಕಳುಹಿಸಿದ್ದಾನೆ. ಬಳಿಕ ಟ್ಯಾಕ್ಸ್ ಹಣವನ್ನು 45,300 ರೂ. ಕಳುಹಿಸಲು ಹೇಳಿದಾಗ ಇದು ಮೋಸದ ಜಾಲ ಎಂದು ತಿಳಿದು ಬಂದಿದೆ.
ಎಟಿಎಂ ಕಾರ್ಡ್ ಅಪ್ಡೇಟ್ ಮಾಡುವುದಾಗಿ ವಂಚನೆ : ಎಟಿಎಂ ಕಾರ್ಡ್ ಅಪ್ಡೇಟ್ ಮಾಡಿಕೊಡುವುದಾಗಿ ತಿಳಿಸಿ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ 70 ಸಾವಿರಕ್ಕೂ ಹೆಚ್ಚು ಹಣವನ್ನು ವಂಚನೆ ಮಾಡಲಾಗಿದೆ. ಕೆಪಿಟಿಸಿಎಲ್ ನೌಕರನೋರ್ವನಾಗಿರುವ ದಾವಣಗೆರೆಯ ಜಯನಗರದ ಬಿ ಬ್ಲಾಕ್ ಮೂಲದವರಾದ ಹೆಚ್. ಗುರುಬಸವರಾಜ ಎಂಬುವರು ವಂಚನೆಗೊಳಗಾದವರು.
ಆನ್‌ಲೈನ್ ಮೂಲಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದರ ಸಂಬಂಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರವಾಣಿ ಮೂಲಕ ಗುರುಬಸವರಾಜರನ್ನು ಸಂಪರ್ಕ ಮಾಡಿ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಅಪ್ಡೇಟ್ ಮಾಡಿ ಕೊಡುವುದಾಗಿ ಎಂದು ತಿಳಿಸಿ ಓಟಿಪಿ ಪಡೆದು ವಂಚನೆ ಮಾಡಲಾಗಿದೆ.
ಉಡುಗೆ ಖರೀದಿಸಲು ಹೋಗಿ ಹಣ ಕಳೆದುಕೊಂಡ ವಿದ್ಯಾರ್ಥಿನಿ : ವಿದ್ಯಾರ್ಥಿಯೋರ್ವಳು ಆನ್‌ಲೈನ್ ಮೂಲಕ ಉಡುಗೆ ಕೊಳ್ಳಲು ಹೋಗಿ ಬ್ಯಾಂಕ್ ಖಾತೆಯಲ್ಲಿದ್ದ 49,500 ರೂ. ಹಣ ಕಳೆದುಕೊಂಡಿರುವ ಘಟನೆ ಕಳೆದ ದಿನ ನಡೆದಿದೆ. ದಾವಣಗೆರೆಯ ವಿದ್ಯಾನಗರದ ಯುಬಿಡಿಟಿ ವಿದ್ಯಾರ್ಥಿ ನಿಲಯದಲ್ಲಿರುವ ಪ್ರಿಯಾಂಕ ರಾಜ್ ಮೋಸಕ್ಕೊಳಗಾದವರು.
ನೋರ್ ಫ್ಯಾಷನ್ ಎಂಬ ವೆಬ್‌ಸೈಟ್‌ನಲ್ಲಿ ಡ್ರೆಸ್ ಬುಕ್ ಮಾಡಿದ್ದರು. ಅದು ಬಾರದೆ ಇರುವ ಬೆನ್ನಲ್ಲೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದ ಪ್ರಿಯಾಂಕ್ ರಾಜ್ಗೆ ವ್ಯಕ್ತಿ ನಿಮಗೆ ಬಂದಿರುವ ಸಂದೇಶ ಬೇರೆಯವರಿಗೆ ಫಾರ್ವರ್ಡ್ ಮಾಡಿ ಎಂದಾಕ್ಷಣ ಸಂದೇಶ ಫಾರ್ವರ್ಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ₹49,500 ಹಣ ಕಡಿತಗೊಂಡಿದೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಲಕ್ಷ ಕಳೆದುಕೊಂಡ ಖಾದಿ ಭಂಡಾರದ ಮ್ಯಾನೇಜರ್ : ಖಾದಿ ಇಂಡಿಯಾ ಭಂಡಾರದ ಮ್ಯಾನೇಜರ್ ಬ್ಯಾಂಕ್‌ನಲ್ಲಿ 1 ಲಕ್ಷ ನಗದು ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ನಿಟ್ಟುವಳ್ಳಿ ಕೆಎಸ್ಆರ್ಟಿಸಿ ಪಕ್ಕದ ಖಾದಿ ಇಂಡಿಯಾ ಭಂಡಾರದ ಮ್ಯಾನೇಜರ್ ಶರಣ್ ರಾಜ್ ಹಣ ಕಳೆದಕೊಂಡವರು.
ಶರಣ್ ರಾಜ್ ಮಹಿಳೆಯೋರ್ವಳಿಗೆ ಚಲನ್ ಬರೆದುಕೊಡುವಾಗ ತಮ್ಮ ಬಳಿ ಇದ್ದ ಒಂದು ಲಕ್ಷ ಹಣ ಇರುವ ಬ್ಯಾಗ್ ಅನ್ನು ಬ್ಯಾಂಕ್‌ನ ಟೇಬಲ್ ಮೇಲೆ ಇರಿಸಿ, ಚಲನ್ ಬರೆಯುವಾಗ ಈ ಘಟನೆ ಜರುಗಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.