ಹರಿಹರ: ತಾಲೂಕಿನ ಬನ್ನಿಕೋಡು ಗ್ರಾಮದ ಅಭಿಷೇಕ್ ಎನ್ನುವರರ ಕೋಳಿ ಫಾರಂನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರೊದು ಈಗ ಧೃಡ ಪಟ್ಟಿದೆ. ಚೀನಾದಲ್ಲಿ ಹುಟ್ಟಿದ ಕೊರೊನಾ ವಿಶ್ವದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದಿದ್ದು, ಬೆಣ್ಣೆನಗರಿಯ ಜನರು ಕೊರೊನಾ ವೈರಸ್ ಭೀತಿಯಲ್ಲೇ ದಿನ ದೂಡುತ್ತಿದ್ದಾರೆ. ಆದರೇ ಇದೀಗ ಹಕ್ಕಿಜ್ವರ ಕಾಣಿಸಿಕೊಂಡಿರೋದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಬನ್ನಿಕೋಡು ಗ್ರಾಮದ ಅಭಿಷೇಕ್ ಎಂಬುವವರ ಕೋಳಿ ಫಾರಂನಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೋಳಿಗಳು ಸಾಯಲು ಆರಂಭವಾಗಿದ್ದವು. ಇದರಿಂದ ಆತಂಕಗೊಂಡ ಅಭಿಷೇಕ್ ಒಂಬತ್ತು ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೆಗೆದು ಹೂತು ಹಾಕಿದ್ದರು. ಇದರಿಂದ ಅನುಮಾನಗೊಂಡ ಪಶು ವೈದ್ಯಾಧಿಕಾರಿಗಳು ಕೋಳಿಗಳ ಸ್ಯಾಂಪಲ್ ಅನ್ನು ಬೋಪಾಲ್‌ಗೆ ಕಳುಹಿಸಿದ್ದು, ಇದೀಗ ಹಕ್ಕಿಜ್ವರದಿಂದ ಮೃತ ಪಟ್ಟಿರೋದು ಧೃಡ ಪಟ್ಟಿದೆ.
ಹಕ್ಕಿಜ್ವರ ಎಂದು ಧೃಡ ಪಡುತ್ತಿದ್ದಂತೆ ಅಧಿಕಾರಿಗಳ ತಂಡವೇ ಬನ್ನಿಕೋಡು ಗ್ರಾಮಕ್ಕೆ ಭೇಟಿ ನೀಡಿದ್ದು, ಕೋಳಿ ಫಾರಂ ವೀಕ್ಷಣೆ ಮಾಡಿದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಊರು ತುಂಬಾ ಡಂಗೂರ ಸಾರಿಸುವ ಮೂಲಕ ಬದುಕಿದ, ಸತ್ತ ಕೋಳಿಗಳನ್ನು ಗ್ರಾಮದ ಹೊರಗಿನ ಗುಂಡಿಯಲ್ಲಿ ತಂದು ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.