ದಾವಣಗೆರೆ: ನಾವು ವಿಫಲವಾಗಿದ್ದೇವೆ, ಅವರು ವಿಫಲರಾಗಿದ್ದಾರೆ ಎಂಬ ಟೀಕೆ ಮಾಡುವುದು ಸೂಕ್ತವಲ್ಲ. ಕೊರೊನಾ ಎಂಬ ಮಹಾಮಾರಿಯನ್ನು ದೇಶದಿಂದ ಓಡಿಸಬೇಕಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರದ ಸಕ್ಸಸ್ ಅಥವಾ ಫೆಲ್ಯೂರ್ ಬಗ್ಗೆ ಈಗಲೇ ಏನನ್ನೂ ಹೇಳಲು ಆಗದು ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ದಾವಣಗೆರೆಯಲ್ಲಿ ಸೋಂಕು ಹೆಚ್ಚಾಗಿ ಇರಲಿಲ್ಲ. ಈಗ ಜಾಸ್ತಿಯಾಗುತ್ತಿದೆ. ಇದನ್ನು ಹೇಗೆ ಕಡಿಮೆ ಮಾಡಬೇಕೆಂಬುದಷ್ಟೇ ಇರುವ ವಿಚಾರ. ಸರ್ಕಾರ ಒಂದರಿಂದಲೇ ಎಲ್ಲವನ್ನೂ ಮಾಡಲು ಆಗದು ಎಂದು ಅಭಿಪ್ರಾಯಪಟ್ಟರು.
ಪಿಪಿಇ ಕಿಟ್ ಸೇರಿ ಯಂತ್ರೋಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಎರಡು ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ತಡವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರಿ ಆಸ್ಪತ್ರೆ ಅಂದರೆ ಹಾಗೇ ಅಲ್ಲವೇ.. ಅಲ್ಲಿಯೂ ನೂರೆಂಟು ನಿಯಮಾವಳಿ ಇರುತ್ತವೆ. ಎಲ್ಲವನ್ನೂ ನೋಡಿಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.