ದಾವಣಗೆರೆ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಶಾಲೆಯ ಕಟ್ಟಡಗಳು ಕುಸಿಯುವ ಹಂತ ತಲುಪಿವೆ. ಹೀಗಾಗಿ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಕ್ಯಾಂಪ್ನಲ್ಲಿರುವ ಸರ್ಕಾರಿ ಉರ್ದು ಶಾಲೆ ದುಃಸ್ಥಿತಿಗೆ ತಲುಪಿದ್ದು, ಶಾಲೆಯ ಕಟ್ಟಡ ಗೋಡೆಗಳು ಆಗೋ ಈಗೋ ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಅಂಗೈಯಲ್ಲಿ ತಮ್ಮ ಜೀವ ಹಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಸರ್ಕಾರಿ ಉರ್ದು ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ಇದ್ದು ಅಂದಾಜು 200 ರಿಂದ 300ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಚನ್ನಗಿರಿ ತಾಲೂಕು ಮಲೆನಾಡು ಪ್ರದೇಶವಾಗಿದ್ದರಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಶಾಲೆಯ ಬೇರೆ ಬೇರೆ ಕೊಠಡಿಗಳ ಚಾವಣಿಗಳಲ್ಲಿ ತೇವಾಂಶ ಇಳಿಯುತ್ತಿದೆ.
ಹೀಗಾಗಿ ಚಾವಣಿ ಹಾರಿಹೋಗಿ,ಗೋಡೆ ಆಗೋ ಈಗೋ ಬೀಳಬಹುದೆಂದು ಆತಂಕದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಸರ್ಕಾರಿ ಉರ್ದು ಶಾಲೆ ಕಟ್ಟಡದ ದುಃಸ್ಥಿತಿಗೆ ಹೆದರಿ ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೇರೊಂದು ಕೋಣೆಯಲ್ಲಿ ಪಾಠ ಮಾಡಲಾಗ್ತಿದೆ.
ದುರಸ್ತಿಗೆ ಪೋಷಕರ ಆಗ್ರಹ: ನಲ್ಲೂರು ಉರ್ದು ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡುವಂತೆ ಗ್ರಾಮಸ್ಥರು, ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪ್ರಸ್ತುತ ಮಕ್ಕಳು ಪಾಠ ಕೇಳುತ್ತಿರುವ ಕೋಣೆಯೂ ಕೂಡ ಅವ್ಯವಸ್ಥೆಯಿಂದ ಕೂಡಿದೆ. ನೆಲ ಕೂಡ ಒಡೆದು ಹೋಗಿದೆ. ಅದರಲ್ಲಿ ಮಕ್ಕಳು ಕೂತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ. ಹಾನಿಗೊಂಡಿರುವ ಕಟ್ಟಡಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ಶಿಕ್ಷಕರು ನಿಲ್ಲಿಸಿದ್ದು, ಅಂಥ ಕೊಠಡಿಗಳು ರಾತ್ರಿ ಹೊತ್ತು ಅನೈತಿಕ ಚಟುವಟಿಕೆ ತಾಣವಾಗಿವೆ ಎಂದು ದೂರಿದ್ದಾರೆ.
ಗ್ರಾಮಸ್ಥ ಆಸೀಫ್, ಶಾಲೆಯ ಚಾವಣಿ ಬಿದ್ದಿದ್ದು, ಶಾಲೆಯ ಮೂರ್ನಾಲ್ಕು ಗೋಡೆಗಳು ಬೀಳುವ ಸ್ಥಿತಿಯಲ್ಲಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಶಾಲೆಯನ್ನು ದುರಸ್ತಿ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಶಾಲೆಯ ಮೂರ್ನಾಲ್ಕು ಕೊಠಡಿಗಳು ಹಿಂದಿನ ವರ್ಷ ಮಳೆಗಾಲದಲ್ಲಿ ದುಃಸ್ಥಿತಿಗೆ ತಲುಪಿದ್ದವು. ಆದರೆ, ಇಲ್ಲಿ ತನಕ ವರ್ಷ ಉರುಳಿದರೂ, ಶಿಕ್ಷಣ ಇಲಾಖೆ ದುರಸ್ತಿ ಮಾತ್ರ ಮಾಡಿಲ್ಲ. ಚಾವಣಿ ಬಿದ್ದು ಕೂಡ ಒಂದು ವರ್ಷ ಕಳೆದಿದೆ. ಮಕ್ಕಳು ಇಂಥ ಕೋಣೆಗಳಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯರಾದ ಇಕ್ವಾಲ್ ಅವರು, ನಲ್ಲೂರು ಉರ್ದು ಶಾಲೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಚೆನ್ನಾಗಿರುವ ಮೂರು ಕೋಣೆಗಳಲ್ಲಿ ಮಾತ್ರ ಶಿಕ್ಷಕರು ಪಾಠ ಮಾಡಲಾಗುತ್ತಿದೆ. ಇಲ್ಲಿನ ಶೌಚಾಲಯದ ಅವ್ಯವಸ್ಥೆ ಹಾಗೂ ಶಾಲಾ ಕಟ್ಟಡದ ಗೋಡೆ ತೇವಾಂಶಗೊಂಡು ಕುಸಿಯುವ ಸ್ಥಿತಿಗೆ ತಲುಪಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ನೂತನ ಕಟ್ಟಡಕ್ಕೆ ಮಂಜೂರು ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂಓದಿ:ಮನೆ ಕುಸಿದಿರುವವರಿಗೆ ತಕ್ಷಣ ಪರಿಹಾರ ಒದಗಿಸಬೇಕು: ಸರ್ಕಾರಕ್ಕೆ ಬಿ ವೈ ವಿಜಯೇಂದ್ರ ಒತ್ತಾಯ