ದಾವಣಗೆರೆ: ಅನೈತಿಕ ಸಂಬಂಧದ ಕಾರಣದಿಂದ ಪ್ರಿಯಕರನ ಜೊತೆ ಪತಿ ಕೊಲೆ ಮಾಡಿದ್ದ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಿಪ್ಪಮ್ಮ(45) ಪತಿಯನ್ನು ಕೊಂದ ಅಪರಾಧಿ. ತಿಪ್ಪೇಸ್ವಾಮಿ ಕೊಲೆಯಾದ ಪತಿ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ನಿವಾಸಿಗಳಾದ ತಿಪ್ಪಮ್ಮ ಹಾಗೂ ತಿಪ್ಪೇಸ್ವಾಮಿ ಇಬ್ಬರ ನಡುವೆ ಅನೈತಿಕ ಸಂಬಂಧದ ಸಲುವಾಗಿ ನಿತ್ಯ ಗಲಾಟೆಯಾಗುತ್ತಿತ್ತು. ಪತ್ನಿ ತಿಪ್ಪಮ್ಮ ಕಾನನಕಟ್ಟೆ ಗ್ರಾಮದ ಅಜ್ಜಪ್ಪ (46) ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಪತಿ ತಿಪ್ಪೇಸ್ವಾಮಿಗೆ ಗೊತ್ತಾಗಿ ನಡೆದ ಗಲಾಟೆ ತರಾಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಘಟನೆಯ ವಿವರ:
ಕಾನನಕಟ್ಟೆ ಗ್ರಾಮದ ಗೋಪಾಲಪ್ಪ ಅವರ ಜಮೀನಿನಲ್ಲಿ ತಿಪ್ಪೇಸ್ವಾಮಿ ಮತ್ತು ತಿಪ್ಪಮ್ಮ ಇವರ ಮಧ್ಯೆ ಗಲಾಟೆಯಾಗಿದೆ. ಊರಿನಲ್ಲಿ ವಿಷಯ ಗೊತ್ತಾದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಉದ್ದೇಶದಿಂದ ತಿಪ್ಪಮ್ಮ ಹಾಗೂ ಅಜ್ಜಪ್ಪ ಇಬ್ಬರೂ ಸೇರಿ ತಿಪ್ಪೇಸ್ವಾಮಿಯನ್ನು ದೊಣ್ಣೆಯಿಂದ ತಲೆಗೆ ಮತ್ತು ಕಾಲುಗಳಿಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಹೆಣವನ್ನು ಕಾನನಕಟ್ಟೆ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿದ್ದರು. ವಿಷಯ ತಿಳಿದು ಮೃತ ತಿಪ್ಪೇಸ್ವಾಮಿಯ ಮಗ ರಮೇಶ್ ದೂರು ನೀಡಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ.
ದಂಡ, ಜೀವಾವಧಿ ಶಿಕ್ಷೆ:
ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿ ಕೊಲೆಯಾದ ತಿಪ್ಪೇಸ್ವಾಮಿ ಪತ್ನಿ ತಿಪ್ಪಮ್ಮ ಇವಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 40,000/- ದಂಡ, ಇನ್ನೊಬ್ಬ ಆರೋಪಿ ಅಜ್ಜಪ್ಪನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000/- ದಂಡ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗೀತಾ ಕೆ.ಬಿ ತೀರ್ಪು ನೀಡಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ವಿ.ಪಾಟೀಲ್ ವಾದ ಮಂಡಿಸಿದ್ದರು.