ದಾವಣಗೆರೆ : ಯಾರ‍್ಯಾರನ್ನೋ ಕರ್ಕೊಂಡು ಸರ್ಕಾರ ಮಾಡಿದ್ದೇವೆ. ಬಹುಮತ ಬಂದಿದ್ದರೆ ನಮ್ಮ ಸರ್ಕಾರಕ್ಕೆ ಬೆಲೆ ಮತ್ತು ಗೌರವ ಇರುತ್ತದೆ. ಇದೀಗ 120 ಶಾಸಕರಲ್ಲಿ 8 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಬಿದ್ದು ಹೋಗುತ್ತದೆ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದ್ದಾರೆ.
ತಾಲೂಕಿನ ಆನೆಗೋಡು ಗ್ರಾಮದಲ್ಲಿನ ರೈತ ಹುತಾತ್ಮರ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ರೈತರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೂರ್ಣ ಬೆಂಬಲದೊಂದಿಗೆ ಸರ್ಕಾರ ಮಾಡಿದರೆ ಗೌರವ ಹಾಗೂ ಬೆಲೆ ಇರುತ್ತದೆ. ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಎರಡು ಬಾರಿ ಸಿಎಂ ಆದರೂ ಪೂರ್ಣ ಬಹುಮತವಿರಲಿಲ್ಲ. ಆದರೆ ಇದೀಗ ಯಾರ್ಯಾರನ್ನೋ ಕರೆದುಕೊಂಡು ಸರ್ಕಾರ ರಚನೆ ಮಾಡಿದ್ದೇವೆ. ಇದರಲ್ಲಿ 8 ಜನ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.
ರೈತರ ಸಮುದಾಯ ಭವನಕ್ಕೆ ಅನುದಾನ ಕೊಡಿಸುವೆ : ಇನ್ನು ಕೊರೊನಾ ಹಾಗು ನೆರೆ ಹಾವಳಿಯಿಂದ ಸರ್ಕಾರದ ಬಳಿ ಅನುದಾನ ನೀಡಲು ಬೊಕ್ಕಸ ಖಾಲಿಯಾಗಿದೆ. ಆದರೂ ಕೂಡ ರೈತರಿಗೆ ಬೇಕಾದ ಸಮುದಾಯ ಭವನ ಕಟ್ಟಲು ಅನುದಾನ ಕೊಡಿಸಲು ಪ್ರಯತ್ನಿಸುವೆ ಎಂದು ಇದೇ ವೇಳೆ ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.
ಇದನ್ನೂ ಓದಿ : ಕರ್ನಾಟಕದಲ್ಲಿ ಕನ್ನಡ ಕಡ್ಡಾಯ : ಶೀಘ್ರದಲ್ಲೇ ಕಾನೂನು ಜಾರಿ ಎಂದ ಸಿಎಂ ಬೊಮ್ಮಾಯಿ