ದಾವಣಗೆರೆ : ಟಿಪ್ಪು ಸುಲ್ತಾನ್ ಮತಾಂಧ ಅಲ್ಲ ಎಂಬ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ಬಿಜೆಪಿಯ ತತ್ವ, ಸಿದ್ಧಾಂತದ ಬಗ್ಗೆ ಇನ್ನೂ ಸರಿಯಾಗಿ ಪರಿಚಯ ಇಲ್ಲ ಎಂದು ಹಿರಿಯ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ನಗರದ ಮಹಾನಗರ ಪಾಲಿಕೆಯ ಆವರಣದಲ್ಲಿ ಮಾತನಾಡಿ, ಎಚ್. ವಿಶ್ವನಾಥ್ ಕಾಂಗ್ರೆಸ್, ಜೆಡಿಎಸ್ನಲ್ಲಿ ಇದ್ದು ಬಂದವರು. ಸಂಸದರಾಗಿ, ಶಾಸಕರಾಗಿ ವಿಶ್ವನಾಥ್ ಅವರಿಗೆ ರಾಜಕಾರಣದ ಅನುಭವವಿದೆ. ಅವರು ಪಕ್ಷದ ಕೇಂದ್ರ, ರಾಜ್ಯ ನಾಯಕರ ನಿರ್ಧಾರಕ್ಕೆ ಬದ್ಧರಿರಬೇಕು. ಮಾಧ್ಯಮದವರು ಏನೋ ಕೇಳಿರುತ್ತಾರೆ, ವಿಶ್ವನಾಥ್ ಇನ್ನೇನೋ ಹೇಳಿದ್ದಾರೆ. ನಮ್ಮಲ್ಲಿ ಬೇರೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ವೈ. ವಿಜಯೇಂದ್ರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ವಿರೋಧ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಾರೆ. ಯಡಿಯೂರಪ್ಪ ದಕ್ಷ ಆಡಳಿತ ನಡೆಸುತ್ತಿದ್ದಾರೆ. ಮುಂದೆಯೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಿದ್ದಾರೆ. ಮುಂದಿನ ಮೂರು ವರ್ಷ ಅವರೇ ಸಿಎಂ ಆಗಿರುತ್ತಾರೆ. ಯಾವುದೇ ಅನುಮಾನ ಬೇಡ. ವಿಜಯೇಂದ್ರ ಶಾಸಕರ ಸಹಿ ಸಂಗ್ರಹಿಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಯಾರೋ ಸಹಿ ಹಾಕಿದ್ದರೆ ನಂಬಲಾಗುತ್ತಾ. ಯಾವ ಶಾಸಕರು ಸಹಿ ಹಾಕಿದ್ದಾರೆ ಎಂದು ಹೆಸರು ಹೇಳಲಿ ಎಂದು ಸವಾಲೆಸೆದರು.
ಉಸ್ತುವಾರಿ ಸಚಿವರ ಬದಲಾವಣೆ ಇಲ್ಲ:
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಇಲ್ಲ, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಮನೆಯಲ್ಲಿ ಶಾಸಕರ ಸಭೆ ನಡೆದಿರುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ, ಸಭೆಗೆ ನನ್ನನ್ನು ಕರೆದಿಲ್ಲ. ಹೀಗಾಗಿ ಅಲ್ಲಿ ಏನಾಯ್ತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಜಿಲ್ಲೆಯವರನ್ನು ಸಚಿವರನ್ನಾಗಿ ಮಾಡಬೇಕೆಂಬ ಬಗ್ಗೆ ಯಾರೂ ಮಾತುಕತೆ ನಡೆಸಿಲ್ಲ ಎಂದು ಹೇಳಿದರು.