ದಾವಣಗೆರೆ : ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಲ್ಲ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ನಾನು ಎಂದು ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ಸಿಎಂ ಆಗುವ ಬಗ್ಗೆ ಹೇಳಿದ್ದಾರೆ, ಅದು ಸರಿಯಲ್ಲ. ಸಿಎಂ ಆಗುವುದಾದ್ರೆ ಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ.
ಪಕ್ಷ ವರಿಷ್ಠರು ಹೇಳಿದ್ರೆ ಸಿಎಂ ಆಗಲಿ. ಆದ್ರೆ, ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರಿಯುತ್ತಾರೆ. ಇನ್ನುಳಿದ ದಿನಗಳಿಗೆ ಸಿಎಂ ಆಗಿ ಯಡಿಯೂರಪ್ಪನವರೇ ಇರುತ್ತಾರೆಂದು ಪಕ್ಷದ ವರಿಷ್ಠರೇ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಕೆಲವರು ಸಿಎಂ ಸ್ಥಾನದ ಬಗ್ಗೆ ಮಾತಾಡುತ್ತಾರೆ. ಅದು ಅವರ ಘನತೆಗೆ ತಕ್ಕುದಲ್ಲ ಎಂದು ಶಾಸಕ ರೇಣುಕಾಚಾರ್ಯ ಪರೋಕ್ಷವಾಗಿ ಶಾಸಕ ಯತ್ನಾಳ್ಗೆ ಟಾಂಗ್ ಕೊಟ್ಟರು.
ನನ್ನ ಹಾಗೂ ಸಚಿವ ರಮೇಶ ಜಾರಕಿಹೊಳಿ ಮಧ್ಯೆ ಯಾವುದೇ ಮನಸ್ಥಾಪ ಇಲ್ಲ. ಮೊನ್ನೆ ತಾನೆ ಜೊತೆಗೆ ಊಟ ಮಾಡಿದ್ದೇವೆ ಎಂದು ಸ್ಪಷ್ಟ ಪಡಿಸಿದರು. ನನಗೆ ಸುಮ್ಮನಿರಲು ಸಿಎಂ ಅವರು ನೂರಾರು ಕೋಟಿ ರೂಪಾಯಿ ಅನುದಾನ ನೀಡಿಲ್ಲ.
ನನ್ನ ಕ್ಷೇತ್ರಕ್ಕೆ ಅನುದಾನ ಪಡೆಯುವುದು ನನ್ನ ಹಕ್ಕು. ಈಗಾಗಲೇ ಮೂರು ಸಾವಿರ ಕೋಟಿ ಅನುದಾನ ಹಾಗೂ ಈಗ ಎರಡು ಸಾವಿರ ಕೋಟಿ ರೂಪಾಯಿ ಅನುದಾನವನ್ನು ಹೊನ್ನಾಳಿ ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ನೀಡಿದ್ದಾರೆ ಎಂದು ಅವರು ತಿಳಿಸಿದರು.