ದಾವಣಗೆರೆ: ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ. ಇನ್ನು ಮುಂದೆ ಚುನಾವಣೆಗೆ ಬರುವುದಿಲ್ಲ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಜಿಲ್ಲೆಯ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶನಿವಾರ ಅವರು ಬೇಸರದಿಂದ ಮಾತನಾಡಿದರು.
ರೇಣುಕಾಚಾರ್ಯ ಸೋಲುತ್ತಿದ್ದಂತೆ ಅವರ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಕಣ್ಣೀರಿಟ್ಟರು. ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರು ವಿರುದ್ದ ಸೋಲು ಅನುಭವಿಸಿದ ರೇಣುಕಾಚಾರ್ಯ, ತಮ್ಮ ಅಭಿಮಾನಿಗಳನ್ನು ಸಮಾಧಾನಪಡಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್ ಕೂಡ ರೇಣುಕಾಚಾರ್ಯಗೆ ಧೈರ್ಯ ತುಂಬಿದರು. ಅಭಿವೃದ್ಧಿ ಕೆಲಸ, ಕೋವಿಡ್ನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದರೂ ಜನ ಸೋಲಿಸಿದರು ಎಂದು ರೇಣುಕಾಚಾರ್ಯ ನೋವು ತೋಡಿಕೊಂಡರು. ರಾಜಕೀಯ ನಿವೃತ್ತಿ ಘೋಷಿಸದೇ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಎಂದು ಅವರು ಹೇಳಿದ್ದು ವಿಶೇಷವಾಗಿತ್ತು.
2008 ರಿಂದಲೂ ಹೊನ್ನಾಳಿಯಲ್ಲಿ ಕೈ-ಕಮಲ ಫೈಟ್: ಈ ಬಾರಿಯ ಚುನಾವಣೆ ಬಿಟ್ಟು ಹಿಂದಿನ ಮೂರು ಚುನಾವಣೆಗಳನ್ನು ಗಮನಿಸುವುದಾದರೆ, 2008 ರಿಂದಲೂ ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಹಾಗು ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ನಡುವೆ ಪೈಪೋಟಿ ನಡೆದುಕೊಂಡೇ ಬಂದಿದೆ. 2008ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ವಶವಾಗಿತ್ತು. ರೇಣುಕಾಚಾರ್ಯ 62,483 ಮತಗಳನ್ನು ಪಡೆದು ಶಾಂತನಗೌಡ ವಿರುದ್ಧ ಜಯ ಗಳಿಸಿದ್ದರು.
2013 ಚುನಾವಣೆಯಲ್ಲಿ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. ಶಾಂತನಗೌಡ 78,789 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ ಕೆಜೆಪಿ ಅಭ್ಯರ್ಥಿಯಾಗಿದ್ದ ರೇಣುಕಾಚಾರ್ಯ 60,051 ಮತಗಳನ್ನು ಪಡೆದು ಪರಾಭವಗೊಂಡಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ರೇಣುಕಾಚಾರ್ಯ 80,624 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡ ವಿರುದ್ಧ ಮತ್ತೆ ಗೆಲುವು ಸಾಧಿಸಿದ್ದರು.
76,391 ಮತಗಳನ್ನು ಪಡೆದ ಶಾಂತನಗೌಡ, 4233 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಈ ಬಾರಿ ಮತ್ತೆ ಇವರಿಬ್ಬರ ಮಧ್ಯೆ ಕದನ ನಡೆದಿದ್ದು, ಹೊನ್ನಾಳಿ ಕಾಂಗ್ರೆಸ್ ವಶವಾಗಿದೆ. ನಿನ್ನೆಯ ಫಲಿತಾಂಶದಲ್ಲಿ ರೇಣುಕಾಚಾರ್ಯ 74,832 ಮತ ಪಡೆದರೆ, ಶಾಂತನಗೌಡ 92,392 ಮತ ಪಡೆದು 17,560 ಮತಗಳ ಅಂತರದಿಂದ ಗೆಲುವಿನ ನಗಾರಿ ಬಾರಿಸಿದರು.
ಇದನ್ನೂ ಓದಿ: ಕರುನಾಡಿಗೆ ಯಾರಾಗ್ತಾರೆ ಸಿಎಂ? ಸಿದ್ದರಾಮಯ್ಯ-ಡಿಕೆಶಿ ನಡುವೆ ಪೈಪೋಟಿ; ಹೈಕಮಾಂಡ್ ಅಂಗಳದಲ್ಲಿ ಚೆಂಡು