ದಾವಣಗೆರೆ : ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಭರಾಟೆ ಜೋರಾಗಿದೆ. ದಿನದಿಂದ ದಿನಕ್ಕೆ ರಾಜಕೀಯ ನಾಯಕರ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿ ಪಾರ್ಟಿ ನಾಯಕರು ಮತ್ತು ಬೆಂಬಲಿಗರು ಪ್ರಚಾರ ನಡೆಸುತ್ತಿದ್ದಾರೆ. ಇತ್ತಿಚೇಗೆ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಪ್ರಭುವಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಅದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲ ಪಕ್ಷದ ನಾಯಕರು ಸಹ ಮತದಾರರ ಬಳಿ ತೆರಳಿ ಮತ ಕೇಳಲಿದ್ದಾರೆ. ಇದರ ಮಧ್ಯೆ ಸಂಸದ ಜಿಎಂ ಸಿದ್ದೇಶ್ವರ್ ಅವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ರಾಜ್ಯದಲ್ಲಿ ಯಾರಿಗೆ ಟಿಕೆಟ್ ಸಿಗುತ್ತೊ ಯಾರಿಗೆ ಸಿಗಲ್ವೋ ಎಂಬುದು ಗೊತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಟಿಕೆಟ್ ಹಂಚಿಕೆ ಬಗ್ಗೆ ಗೊತ್ತಿಲ್ಲ, ನಾನು ಶಿಗ್ಗಾವಿಯಲ್ಲಿ ನಿಂತಿದ್ದೆ. ಅಲ್ಲಿ ಗೆಲುವು ಸಾಧಿಸಿ ಸಿಎಂ ಆಗಿದ್ದೇನೆ ಎಂದು ಹಾಗಾಗಿ ಶಿಗ್ಗಾವಿಯಲ್ಲೇ ನಿಲ್ಲುತ್ತೇನೆ ಎಂದು ಹೇಳಬಹುದಷ್ಟೇ. ಆದರೆ, ಚುನಾವಣೆ ಘೋಷಣೆ ಆಗುವವರೆಗೂ ಪಕ್ಷದ ಕೋರ್ ಕಮಿಟಿ ಸಭೆ ಸೇರಲ್ಲ. ಕೋರ್ ಕಮಿಟಿ ಸಭೆ ನಂತರ ಟಿಕೆಟ್ ಹಂಚಿಕೆ ನಿರ್ಧಾರವಾಗಲಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ತಿಳಿಸಿದ್ದಾರೆ.
ಇದನ್ನೂ ಓದಿ : ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಹಂಚಿಕೆ: ಮತಬೇಟೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಟಿಕೆಟ್ ಹಂಚಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಚುನಾವಣೆ ಘೋಷಣೆ ಬಳಿಕ ಕೋರ್ ಕಮಿಟಿ ಸಭೆಯಲ್ಲಿ ಟಿಕೆಟ್ ವಿಚಾರವಾಗಿ ನಿರ್ಧಾರ ಮಾಡಲಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರದ ನಾಯಕರು ಈ ಬಗ್ಗೆ ಎಂಬ ಬಗ್ಗೆ ತೀರ್ಮಾನ ಮಾಡುತ್ತಾರೆ. ಯಾರು ಎಲ್ಲಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ. ಈಗ ನಾವು ಏನೇ ಹೇಳಿದರೂ ಅದು ಅಂತಿಮವಲ್ಲ ಎಂದರು.
ಇದೇ ವೇಳೆ ದಾವಣಗೆರೆ ಉತ್ತರ ಕ್ಷೇತ್ರದಿಂದ ತಾವು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಶಾಸಕ ಸ್ಥಾನಕ್ಕೆ ಹೋಗಲು ಇಷ್ಟ ಇಲ್ಲ. ಮುಂದೆ ಏನಾಗುತ್ತೋ ನೋಡೊಣ ಎಂದರು. ದಾವಣಗೆರೆ ಉತ್ತರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಏನು ಬೇಕಾದರೂ ಹಂಚಲಿ ಇದರಿಂದ ಜನರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು. ಇನ್ನು ಚನ್ನಗಿರಿ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿ, ರಾಜ್ಯದ ನಾಯಕರು ಈ ಬಗ್ಗೆ ಸೂಕ್ತ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಮೋದಿ ನಂತರ ಬಿಜೆಪಿಯಲ್ಲಿ ಬೇರೆ ನಾಯಕರಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರಿಗಿಂತ ದೊಡ್ಡ ನಾಯಕರು ಬರಬಹುದು. ಈ ಹಿಂದೆ ಇಂದಿರಾ ಗಾಂಧಿ ಬಿಟ್ಟರೆ ಯಾರು ಇಲ್ಲ ಎನ್ನುತ್ತಿದ್ದರು. ಬಳಿಕ ಅಟಲ್ ಜಿ ಬಂದರು. ಆಮೇಲೆ ಮೋದಿಯವರು ಬಂದರು. ಮುಂದೇ ಮೋದಿಯವರಿಗಿಂತ ದೊಡ್ಡ ನಾಯಕರು ಬಂದರೂ ಬರಬಹುದು ಎಂದು ಜಿ ಎಂ ಸಿದ್ದೇಶ್ವರ್ ಹೇಳಿದರು.
ಇದನ್ನೂ ಓದಿ : ಬಿಜೆಪಿಯಿಂದ ಆದ ಅನ್ಯಾಯವೇನು?: ಪುಟ್ಟಣ್ಣಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ ಎನ್.ಆರ್.ರಮೇಶ್..