ದಾವಣಗೆರೆ: ಹುಬ್ಬಳ್ಳಿಯ ಹಿಂದೂ ಮುಖಂಡ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಇಂದು ಪ್ರತಿಭಟನೆ ನಡೆಸಲಾಯಿತು. ದಾವಣಗೆರೆಯಲ್ಲಿ ಹಿಂದೂ ಕಾರ್ಯಕರ್ತರು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಗರದ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಟಿಪ್ಪು ಸರ್ಕಾರ, ತುಘಲಕ್ ದರ್ಬಾರ್ ನಡೆಸುತ್ತಿದೆ. ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂಬ ಬರಹದ ಫ್ಲೆಕ್ಸ್ ಹಿಡಿದು ಪ್ರತಿಭಟನೆಗೆ ಇಳಿದ ನೂರಾರು ಕಾರ್ಯಕರ್ತರು, ನಮ್ಮನ್ನೂ ಬಂಧಿಸಿ ಎಂದು ಠಾಣೆಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಎಂದು ಆಕ್ರೋಶ ಹೊರಹಾಕಿದರು. ಇನ್ನು ದಾವಣಗೆರೆ ನಗರದ ಪಿಜೆ ಬಡಾವಣೆಯ ರಾಮ ಮಂದಿರದಿಂದ ಆರಂಭವಾದ ಪ್ರತಿಭಟನೆ ವಿವಿಧ ಹಾದಿಗಳಲ್ಲಿ ಸಾಗಿ ಬಡಾವಣೆ ಪೊಲೀಸ್ ಠಾಣೆಗೆ ತಲುಪಿತು.
ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಮುತ್ತಿಗೆ ಹಾಕುವ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ಮಧ್ಯೆ ತಳ್ಳಾಟ ನೂಕಾಟ ಕೂಡ ನಡೆಯಿತು. ನೂಕಾಟ ತಳ್ಳಾಟ ಹೆಚ್ಚಾದ ಬೆನ್ನಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಹರಿಹರ ಶಾಸಕ ಬಿ ಪಿ ಹರೀಶ್, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸೇರಿದಂತೆ 20ಕ್ಕೂ ಹೆಚ್ಚು ಹಿಂದೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಖಂಡಿಸಿ ದಿಢೀರ್ ಪ್ರತಿಭಟನೆ