ದಾವಣಗೆರೆ: ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಹೀಗಾಗಿ ಸದಾ ಕಾಲೇಜು, ಪರೀಕ್ಷೆ, ಪ್ರಾಜೆಕ್ಟ್ ವರ್ಕ್ ಎಂದು ಬ್ಯೂಸಿಯಾಗಿರುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಮಳೆಗಾಲದ ಮೋಡ ಮುಸುಕಿದ ವಾತಾವರಣದಲ್ಲಿ ಕೆಸರು ಗದ್ದೆ ಓಟ, ಹಗ್ಗ- ಜಗ್ಗಾಟ ಸೇರಿದಂತೆ ಹಲವು ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಸಖತ್ ಎಂಜಾಯ್ ಮಾಡಿದರು.
ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಜೆಜೆಎಂ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನ್ಸೂನ್ ಫಿಯೆಸ್ಟಾ ಕ್ರೀಡೆಗಳನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಹೊರವಲಯದಲ್ಲಿರುವ ಗಾಜಿನ ಮನೆಯ ಕೂಗಳತೆ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ದೇಸಿ ಆಟಗಳ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ. ಇಂದಿನಿಂದ ಆರಂಭವಾಗಿರುವ ಈ ಮಾನ್ಸೂನ್ ದೇಸಿ ಕ್ರೀಡೆ ಎರಡು ವಾರಗಳ ಕಾಲ ನಡೆಯಲಿದೆ.
ಜೆಜೆಎಂ ಮೆಡಿಕಲ್ ಕಾಲೇಜಿನ ನೂರಾರು ಎಂಬಿಬಿಎಸ್ ವಿದ್ಯಾರ್ಥಿಗಳು, ಕೆಸರು ಗದ್ದೆಯಲ್ಲಿ ತಮ್ಮಿಷ್ಟದ ಆಟವಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಸರು ಗದ್ದೆ ಓಟದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಗೆಲುವಿನ ದಡ ಸೇರಲು ಹರಸಾಹಸ ಪಟ್ಟರು. ಇದರ ಜೊತೆಗೆ ಕೆಸರಿನಲ್ಲೇ ವಾಲಿಬಾಲ್ ಕೂಡ ಆಡಿಸಿದ್ದು, ಎರಡು ತಂಡದ ವಿದ್ಯಾರ್ಥಿಗಳು ಕೆಸರಿನಲ್ಲಿ ಮಿಂದೆದ್ದು ಜಿದ್ದಾಜಿದ್ದಿನಿಂದ ಸೆಣಸಿದರು.
ವಿದ್ಯಾರ್ಥಿನಿ ಶ್ರೇಯಾ ಮಾತನಾಡಿ, ಎಂಬಿಬಿಎಸ್ ವಿದ್ಯಾರ್ಥಿಗಳು ಬರೀ ಓದಿನ ಮೇಲೆ ಹೆಚ್ಚು ಗಮನ ಹರಿಸುತ್ತೇವೆ, ಆದರೆ ಇಂದು ಮಾನ್ಸೂನ್ ಫಿಯೆಸ್ಟಾ ಆರಂಭವಾಗಿದೆ. ಇಂದು ಮೊದಲನೇ ದಿನವಾಗಿದ್ದು ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಕೆಸರು ಗದ್ದೆಯಲ್ಲಿ ವಾಲಿಬಾಲ್ ಮತ್ತು ಥ್ರೋಬಾಲ್, ಹಗ್ಗ -ಜಗ್ಗಾಟ ನಡೆಯುತ್ತಿದೆ. ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದಾರೆ, ಪ್ರತಿ ಬ್ಯಾಚ್ನಿಂದ ಎರಡು ತಂಡಗಳು ಕ್ರೀಡೆಗಳಲ್ಲಿ ಭಾಗವಹಿಸುತ್ತಿವೆ ಎಂದರು.
ಚಿನ್ನಿ - ದಾಂಡು ಆಟವೂ ಇಲ್ಲಿದೆ; ಮತ್ತೆ ಮುಂದಿನ ವಾರ ಬುಗುರಿ, ಚಿನ್ನಿದಾಂಡು, ಗೋಲಿ, ಲಗೋರಿ, ಕುಂಟಬಿಲ್ಲೆ ಆಟಗಳನ್ನು ನಡೆಯುತ್ತಿವೆ. ಈ ಆಟಗಳು ಈ ತಿಂಗಳು ಮತ್ತು ಆಗಸ್ಟ್ನಲ್ಲಿಯೂ ನಡೆಯಲಿದೆ. ಈ ರೀತಿಯಾದ ಕಾರ್ಯಕ್ರಮ ಆಯೋಜನೆ ಮಾಡಿದಕ್ಕೆ ಕಾಲೇಜಿಗೆ ಧನ್ಯವಾದ ಹೇಳುತ್ತೇನೆ. ನಾವು ತುಂಬಾ ಎಂಜಾಯ್ ಮಾಡುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಸಾತ್ವೀಕ್ ಅರಸ್ ಮಾತನಾಡಿ, ನಾನು ಇಂದು ಮೊದಲನೇ ಬಾರಿಗೇ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕೆಸರು ಗದ್ದೆಯಲ್ಲಿ ಆಟವಾಡಿದ್ದು ಒಳ್ಳೆಯ ಅನುಭವ ನೀಡಿತು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ತುಂಬಾ ಎಂಜಾಯ್ ಮಾಡುದ್ದೇವೆ. ಇದೇ ಮೊದಲ ಬಾರಿಗೆ ಗದ್ದೆಯಲ್ಲಿ ಆಟವಾಡುತ್ತಿರುವುದು ಎಂದು ಖುಷಿಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಮುರುಗೇಶಪ್ಪ ಮಾತನಾಡಿ, ನಾವು ಇಂದು ಮಾನ್ಸೂನ್ ಫಿಯೆಸ್ಟಾ ಆಯೋಜನೆ ಮಾಡಿದ್ದೇವೆ. ಪ್ರಸ್ತುತ ದಿನಗಳಲ್ಲಿ ದೇಸಿ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಅದ್ದರಿಂದ ಮೆಡಿಕಲ್ ವಿದ್ಯಾರ್ಥಿಗಳು ಈ ದೇಸಿ ಕ್ರೀಡೆಗಳನ್ನು ಆಯೋಜನೆ ಮಾಡಿದ್ದಾರೆ. ಈ ಕ್ರೀಡೆಗಳು ಕೆಲ ಖಾಯಿಲೆಗಳು ಬಾರದಂತೆ ನೋಡಿಕೊಳ್ಳುತ್ತವೆ ಮತ್ತು ನರರೋಗದಂತ ಆರೋಗ್ಯ ಸಮಸ್ಯೆಗಳಿಗೆ ದೇಸಿ ಗೇಮ್ಸ್ ರಾಮಬಾಣವಾಗಿದೆ. ಇನ್ನು ಪಟ್ಟಣದಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಈ ದೇಸಿ ಕ್ರೀಡೆಗಳ ಕುರಿತು ಪರಿಚಯಿಸಲು ಈ ಕಾರ್ಯಕ್ರಮ ವೇದಿಕೆಯಾಗಿದೆ ಎಂದರು.
ಇದನ್ನೂ ಓದಿ: 56ರ ಹರೆಯದಲ್ಲೂ ಸಖತ್ ಫಿಟ್ ನಟ ಮಿಲಿಂದ್ ಸೋಮನ್: ಕಾರಣ ಇದೇ ನೋಡಿ!