ದಾವಣಗೆರೆ: ಹೊನ್ನಾಳಿ ತಾಲ್ಲೂಕು ಎಚ್.ಕಡದಕಟ್ಟೆ ಗ್ರಾಮ ಪಂಚಾಯತ್ ಪಿಡಿಒ ಎಸ್. ರವಿ ನಕಲಿ ಸಹಿ ಹಾಕಿ ಗ್ರಾಮ ಪಂಚಾಯತ್ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಷಡ್ಯಂತ್ರದಿಂದ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಎಚ್.ಕಡದಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮಆರೋಪ ಮಾಡಿದ್ದಾರೆ.
ನಾಲ್ಕೂವರೆ ವರ್ಷಗಳಿಂದ ನಾನು ಚೆನ್ನಾಗಿ ಅಧಿಕಾರ ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ ಪಿಡಿಒ ಎಸ್.ರವಿ ಬಂದ ಮೇಲೆ ಗ್ರಾಮ ಪಂಚಾಯತ್ ಕಾಮಗಾರಿಗಳನ್ನು ಪರಿಶೀಲನೆ ಮಾಡದೇ ಚೆಕ್‌ಗಳಿಗೆ ಸಹಿ ಮಾಡಲು ತಿಳಿಸುತ್ತಿದ್ದರು, ಆದರೆ ನಾನು ಮಾಡುತ್ತಿರಲಿಲ್ಲ. ಕಾಮಗಾರಿಗಳನ್ನು ವೀಕ್ಷಿಸಿ ಷರಾ ಬರೆಯುತ್ತಿದ್ದೆ. ನಿಯತ್ತಾಗಿ ಕೆಲಸ ಮಾಡಿದಕ್ಕೆ 15 ಸದಸ್ಯರು ಒಟ್ಟಾಗಿ ನನ್ನ ವಿರುದ್ಧ ಅವಿಶ್ವಾಸ ಮಂಡನೆ ಮಾಡಿ, ನವೆಂಬರ್ 5ರಂದು ಪದಚ್ಯುತಿಗೊಳಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ನಾನು ಹೊರಗೆ ಬಂದ ಮೇಲೆ ಉಪಾಧ್ಯಕ್ಷರಿಗೆ ಪ್ರಭಾರಿಯಾಗಿ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವನ್ನು ಉಪಾಧ್ಯಕ್ಷರಿಗೆ ವಹಿಸಿದ್ದಾರೆ. ಇದು ಕಾನೂನು ಬಾಹಿರ ನನಗೆ ನ್ಯಾಯ ಒದಗಿಸಿಕೊಡಬೇಕು ಲಕ್ಷ್ಮಮ್ಮ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗೆ ದೂರು:
ಗ್ರಾಮ ಪಂಚಾಯತ್ ಹಣ ದುರ್ಬಳಕೆ ಕುರಿತು ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ತಾಲ್ಲೂಕು ಪಂಚಾಯತ್ ಇಒಗೆ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಅವರು ಅಲವತ್ತುಕೊಂಡರು.