ದಾವಣಗೆರೆ: ಮುಖ್ಯಮಂತ್ರಿಯಾಗಿದ್ದಾಗ ಬಿ. ಎಸ್. ಯಡಿಯೂರಪ್ಪ ಜೈಲಿಗೆ ಹೋಗಲು ರಾಜಕೀಯ ಷಡ್ಯಂತ್ರ ಕಾರಣ. ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಡಾ. ಸಂತೋಷ್ ಹೆಗ್ಡೆಯವರು ದುರುದ್ದೇಶಪೂರ್ವಕವಾಗಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದರು ಎಂದು ಸಿಎಂ ಆಪ್ತ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ನ್ಯಾಮತಿಯ ರಾಮೇಶ್ವರ ಗ್ರಾಮದಲ್ಲಿ ಮಾತನಾಡಿದ ಅವರು, ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನವರು, ಯಡಿಯೂರಪ್ಪನವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಲೂಟಿ ಮಾಡಿಲ್ಲ. ಆದರೂ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರ ಕುತಂತ್ರದಿಂದ ಅರೆಸ್ಟ್ ಆಗುವಂತಾಯ್ತು. ಅಂದಿನ ರಾಜ್ಯಪಾಲ ಹಂಸರಾಜ್ ಅಲ್ಲ ಧ್ವಂಸರಾಜ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ನನ್ನ ಅತ್ಯಂತ ಸ್ನೇಹಿತರು. ಅವರು ಜೈಲಿಗೆ ಹೋಗಬೇಕೆಂದು ನಾನಾಗಲೀ, ಬಿಜೆಪಿಯಾಗಲೀ ಬಯಸಿಲ್ಲ. ಡಿ. ಕೆ. ಶಿವಕುಮಾರ್ ಜೈಲಿನಲ್ಲಿದ್ದಾರೆ ಎಂಬುದಕ್ಕೆ ಖುಷಿಪಡಲ್ಲ. ಆದಷ್ಟು ಬೇಗ ಹೊರಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಂಧಿಸಿದಾಕ್ಷಣ ಶಿಕ್ಷೆ ಆಗಲ್ಲ. ಜನರಿಂದಲೇ ಶಿಕ್ಷೆಯಾಗಬೇಕು ಎಂದು ಹೇಳಿದರು.
ಯುಪಿಎ ಅಧಿಕಾರದಲ್ಲಿದಾಗ ಇಡಿ, ಸಿಬಿಐ ಬಳಸಿಕೊಂಡು ಅದೆಷ್ಟೋ ಜನ ಅರೆಸ್ಟ್ ಮಾಡಿದ್ದಾರೆ. ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿ ಖುಷಿಪಟ್ಟೀರಿ. ಆಗ ನಾವು ಬಸ್ ಸುಟ್ಟಿಲ್ಲ, ಹೋರಾಟ ಮಾಡಿಲ್ಲ ಎಂದರಲ್ಲದೇ, ಕಾಂಗ್ರೆಸ್ ನವರು ತಮ್ಮ ಮನೆಯ ವಾಹನಗಳನ್ನು ಸುಟ್ಟು ಆಮೇಲೆ ಡಿಕೆಶಿ ಬಂಧನದ ವಿರುದ್ಧ ಹೋರಾಟ ಮಾಡಿ ಎಂದು ಸಲಹೆ ನೀಡಿದರು.
ರಾಜಕಾರಣಿಗಳ ಹೇಳಿಕೆಗಳು ಸ್ವಲ್ಪ ವ್ಯತ್ಯಾಸವಾದರೂ ವಿಜೃಂಭಿಸುವುದು ಬೇಡ. ಬಿಜೆಪಿಯ ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ ಉದ್ಧಟತನ ಹೇಳಿಕೆ ಕೊಡುವುದಿಲ್ಲ. ಕಾಂಗ್ರೆಸ್ - ಜೆಡಿಎಸ್ನ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದರು. ನಾನು ಯಾವ ಪಕ್ಷ ಅಂತಾ ಹೇಳಿಲ್ಲ. ಕಾಂಗ್ರೆಸ್, ಜೆಡಿಎಸ್ ವಿರುದ್ಧ ರಾಜೀನಾಮೆ ಕೊಟ್ಟು ಬಂದರೆ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿರಬಹುದು. ಆದರೆ ಏನೇ ಆದರೂ ಬಿಜೆಪಿ ವರಿಷ್ಠರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದರು.