ಹರಿಹರ: ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮಧ್ಯಾಹ್ನ 2 ಗಂಟೆಯ ನಂತರ ಸ್ವಯಂ ಪ್ರೇರಿತರಾಗಿ ಲಾಕ್ಡೌನ್ ಮಾಡಿ ಎಂದು ಶಾಸಕ ಎಸ್. ರಾಮಪ್ಪ ಮನವಿ ಮಾಡಿದರು.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ದಿನದಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಸೋಂಕು ಹರಡದಂತೆ ತಡೆಯಲು ನಮ್ಮಲ್ಲಿ ಇರುವುದು ಒಂದೇ ಮಾರ್ಗ, ಅದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಮಧ್ಯಾಹ್ನದ ನಂತರ ಮುಚ್ಚುವುದು. ಈ ಹಿಂದೆ ನಗರದಲ್ಲಿ ಇದೇ ರೀತಿಯ ತೀರ್ಮಾನ ಮಾಡಲಾಗಿತ್ತು. ಆದರಿಂದ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಸಡಿಲಿಕೆಯ ನಂತರ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಗಳಿಂದ ನಗರದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಬೇರೆ ಸ್ಥಳಗಳಿಂದ ಬಂದವರಿಂದ ಈ ಸಮಸ್ಯೆ ಉಲ್ಬಣವಾಗುತ್ತಿದೆ.
ಈ ಕಾರಣದಿಂದ ನಗರದಲ್ಲಿನ ವರ್ತಕರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನದ ನಂತರ ಲಾಕ್ ಡೌನ್ ಮಾಡಿ ಕೊರೊನಾ ಸೋಂಕು ಹರಡದಂತೆ ಸಹಕರಿಸಿ. ಕಂಟೈನ್ಮೆಂಟ್ ಝೋನ್ನಲ್ಲಿನ ಜನರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡಿ. ಯಾರಾದರೂ ಅನಾವಶ್ಯಕವಾಗಿ ಸುತ್ತಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ಪೊಲೀಸರಿಗೆ ಸೂಚಿಸಿದ್ದಾರೆ.