ದಾವಣಗೆರೆ: "ಬಿಜೆಪಿಯವರು ಮೊದಲಿನಿಂದಲೂ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಅವರಿಗಿದು ಹೊಸತಲ್ಲ. ಈ ಹಿಂದೆ 17 ಜನ ಶಾಸಕರನ್ನು ಆಪರೇಷನ್ ಮಾಡಿದ್ದರು. ಈಗ 40 ಶಾಸಕರನ್ನು ಆಪರೇಷನ್ ಕಮಲ ಮಾಡಲಾಗದು. ಅವರದ್ದು ತಿರುಕನ ಕನಸು" ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರ ಅನಿಸಿಕೆ ಹೇಳಿದ್ದಾರೆ. ನಮ್ಮ ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ" ಎಂದರು.
ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಎಂಬ ಬಗ್ಗೆ ಮಾತನಾಡುತ್ತಾ, "ಇದೆಲ್ಲ ಹೈಕಮಾಂಡ್ಗೆ ಬಿಟ್ಟಿದ್ದು. ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಸ್ಕೀಂಗಳನ್ನು ತಂದು, ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೆಲವು ಶಾಸಕರು ಅವರ ನಾಯಕ ಸಿಎಂ ಆಗಲಿದೆ ಎಂದು ಹೇಳುತ್ತಾರೆ, ಅದರಲ್ಲಿ ತಪ್ಪೇನಿಲ್ಲ" ಎಂದು ಹೇಳಿದರು.
"ಕಾಂಗ್ರೆಸ್ನಲ್ಲಿ ಯಾವುದೇ ಬಣ ಇಲ್ಲ. ಸಚಿವ ಸತೀಶ್ ಜಾರಕಿಹೊಳಿ ತಮ್ಮ ಜಿಲ್ಲೆಯ ಶಾಸಕರ ಜೊತೆ ದಸರಾ ನೋಡಲು ಹೊರಟಿದ್ದರು. ಅದರಲ್ಲಿ ತಪ್ಪೇನಿದೆ ಎಂದ ಅವರು, ಲೋಕಾಸಭಾ ಚುನಾವಣೆ ಬಗ್ಗೆ ಮಾತನಾಡಿ, ಇನ್ನೂ ಸಮಯವಿದೆ, ಆಮೇಲೆ ನೋಡೋಣ" ಎಂದರು.
"ಮಾಧ್ಯಮಗಳಲ್ಲಿ ದಾವಣಗೆರೆಯ ಸ್ಮಾರ್ಟ್ ಸಿಟಿ ಯೋಜನೆಯನ್ನು ನಾವೇ ಮಾಡಿಸಿದ್ದು ಎಂದು ಹೇಳುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಜೆ.ಪಿ ಅಂತೆ ಅವನ್ಯಾರು ಬಂದು ಪರಿಶೀಲನೆ ಮಾಡಲು?. ಅವನು ಸ್ಮಾರ್ಟ್ ಸಿಟಿ ಯೋಜನೆ ದುಡ್ಡು ನಮ್ಮದು ಎಂದಿದ್ದಾನೆ. ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲು ರಾಜ್ಯ ಸರ್ಕಾರದ್ದು 50% ಹಣ, ಆಮೇಲೆ ಕೇಂದ್ರ ಸರ್ಕಾರದ್ದು, ಮೊದಲು ಅವರಿಗೆ ತಿಳಿವಳಿಕೆ ಇಟ್ಟುಕೊಂಡು ಮಾತನಾಡಲು ಹೇಳಿ. ಅವರು ಲೋಕಸಭಾ ಸದಸ್ಯರಿರಲಿ, ಅವರ ಬೆಂಬಲಿಗರಿರಲಿ. ಮೊದಲು ಎಲ್ಲಿಂದ ಬಂತು ಗ್ರ್ಯಾಂಟ್, ಯಾರು ಸ್ಕೀಂ ಮಾಡಿದ್ದು, ಯಾರು ಪ್ರಾರಂಭ ಮಾಡಿದ್ದು ಎಂದು ತಿಳಿದುಕೊಳ್ಳಲಿ. ಎಂಪಿ ಗ್ರ್ಯಾಂಟ್ನಿಂದ ಎಲ್ಲೆಲ್ಲಿಗೆ ಹಣ ಕೊಟ್ಟಿದ್ದಾರೆಂದು ಮೊದಲು ಲೆಕ್ಕ ಕೊಡೋಕೆ ಹೇಳಿ ಎಂದು ದಾವಣಗೆರೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕ ಸಂಭ್ರಮ-50; ಕಾಂಗ್ರೆಸ್ ಸರ್ಕಾರಕ್ಕೆ ಅಷ್ಟ ಪ್ರಶ್ನೆ ಇಟ್ಟ ಬಿ ವೈ ವಿಜಯೇಂದ್ರ
ರಮೇಶ್ ಜಾರಕಿಹೊಳಿ ಆಟ ನಡೆಯಲ್ಲ: ಮತ್ತೊಂದೆಡೆ, ರಮೇಶ್ ಜಾರಕಿಹೊಳಿ ಅವರ ಆಟ ಈ ಸಾರಿ ನಡೆಯುವುದಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಡಿಕೆಶಿಯವರು ಮಾಜಿ ಮಂತ್ರಿ ಆಗುವುದಿಲ್ಲ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದ್ದಾರೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿ ಸರ್ಕಾರ ಕೆಡವಿದರು. ಈಗ ಅಂಥ ಕೆಲಸ ನಡೆಯುವುದಿಲ್ಲ. ನಾವು 136 ಕಾಂಗ್ರೆಸ್ ಶಾಸಕರು ಜೊತೆಗಿದ್ದೇವೆ. ಆಪರೇಷನ್ ಮಾಡಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಆಡಿಯೋ, ವಿಡಿಯೋ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.