ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉಪಚುನಾವಣೆ ನೇತೃತ್ವ ವಹಿಸಲಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾನುವಾರ ಸಂಜೆ ಕೋರ್ ಕಮಿಟಿ ಸಭೆಯಲ್ಲಿ ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದರು.
ರಾಜ್ಯ ಸರ್ಕಾರ ಇನ್ನೂ ಸರಿಯಾಗಿ ಆಡಳಿತ ನಡೆಸುತ್ತಿಲ್ಲ, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಿಗೆ ಬೇರೆ ಕೆಲಸವಿಲ್ಲ, ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ಇತರೆ ನಾಯಕರು ಕೇವಲ ಬೆಲೆ ಏರಿಕೆ ಬಗ್ಗೆ ಮಾತ್ರ ಮಾತನಾಡ್ತಾರೆಯೇ ವಿನಃ ಉಚಿತ ವ್ಯಾಕ್ಸಿನ್, ಪಡಿತರದ ಬಗ್ಗೆ ಯಾರೂ ಮಾತನಾಡಲ್ಲ. ವಾಸ್ತವ ಪರಿಸ್ಥಿತಿಯನ್ನು ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆಯಾಗಿಲ್ಲ, ರೈತರ ಖಾತೆಗೂ ಪ್ರೋತ್ಸಾಹಧನ ವರ್ಗಾವಣೆಯಾಗಿದೆ ಎಂದರು.
ಸಿದ್ದರಾಮಯ್ಯ ರಾಜಕಾರಣಕ್ಕಾಗಿ ಈ ರೀತಿ ಮಾತನಾಡುವುದು ಶೋಭೆ ತರಲ್ಲ, ವಸ್ತುಸ್ಥಿತಿ ಅರ್ಥ ಮಾಡಿಕೊಂಡು ಮಾತನಾಡಲಿ, ವಿರೋಧ ಮಾಡಲೇಬೇಕೆಂಬ ಕಾರಣಕ್ಕೆ ಟೀಕೆ ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೇಳಿದರು.
ಸಿದ್ದರಾಮಯ್ಯ ಅಹಿಂದ ಆರಂಭಿಸಿದರು ಕೂಡ ಏನೂ ಅಗಲ್ಲ, ನಾವೂ ಕೂಡ ಅಹಿಂದದಲ್ಲಿದ್ದೇವೆ, ನಾವು ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬಂದಿದ್ದೇವೆ. ಕಮಲದ ಚಿಹ್ನೆ ಅಡಿಯಲ್ಲಿಯೇ ಸ್ಪರ್ಧಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಸಚಿವ ಭೈರತಿ ಬಸವರಾಜ್ ಭವಿಷ್ಯ ನುಡಿದರು.
ಇದನ್ನೂ ಓದಿ:ಪರಿಷತ್ ಚುನಾವಣೆ: ತಮ್ಮನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಶಾಸಕಿ ಹೆಬ್ಬಾಳ್ಕರ್ ಕಸರತ್ತು