ದಾವಣಗೆರೆ: ಯಡಿಯೂರಪ್ಪನವರು ರಾಜೀನಾಮೆ ನೀಡಲು ಸಿದ್ದ ಎಂದು ಯಾವ ಆ್ಯಂಗಲ್ನಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಮುಂದಿನ ಎರಡು ವರ್ಷ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯನ್ನು ಯಡಿಯೂರಪ್ಪನವರ ನೇತೃತ್ವದಲ್ಲೇ ಎದುರಿಸುತ್ತೇವೆ. ನಾನು ನಿನ್ನೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದ್ದೇನೆ. ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ಸಚಿವರು ಶಾಸಕರು ಸಿಎಂ ಬೆಂಬಲಕ್ಕಿದ್ದಾರೆ ಎಂದರು.
ರೇಣುಕಾಚಾರ್ಯರ ಸಹಿ ಸಂಗ್ರಹದ ಕುರಿತು ಪ್ರತಿಕ್ರಿಯಿಸಿದ ಅವರು, 65 ಶಾಸಕರ ಸಹಿ ಸಂಗ್ರಹಿಸಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಸಹಿ ಸಂಗ್ರಹದ ಪರ, ವಿರೋಧ ಎಂಬವುದೇನು ಇಲ್ಲ. ಎಲ್ಲಾ ಶಾಸಕರು ಸಿಎಂ ಪರ ಇದ್ದಾರೆ. ಕೊರೊನಾ ಕಷ್ಟ ಕಾಲದಲ್ಲಿ ಸಿಎಂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬರು ಮಾತ್ರ ಕಳೆದ ಎರಡು ವರ್ಷಗಳಿಂದ ಸಿಎಂ ವಿರುದ್ಧ ಅಪಸ್ವರ ಎತ್ತುತ್ತಲೇ ಇದ್ದಾರೆ. ಅವರಿಗೆ ಮಿನಿಸ್ಟರ್ ಆಗಲಿಲ್ಲ ಎಂಬ ಅಸಮಾಧಾನವಿದೆ. ಅದಕ್ಕಾಗಿ ಹಾಗೆ ಮಾತನಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ಗೆ ಟಾಂಗ್ ನೀಡಿದರು.