ದಾವಣಗೆರೆ: ಯಾವುದೋ ಒಂದು ಕುಟುಂಬ ಅಥವಾ ಯಾರೋ ಕೆಲವು ಜನ ಉಪವಾಸ ಕುಳಿತ ಕಾರಣ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುವ ಇತಿಹಾಸವನ್ನೇ ನಮ್ಮ ಮಕ್ಕಳು ನಂಬಿದ್ದಾರೆ. ಅದರಾಚೆಗಿನ ಬಲಿದಾನ, ತ್ಯಾಗಗಳ ಬಗ್ಗೆ ನಮ್ಮ ಇತಿಹಾಸ ತಿಳಿಸಿಕೊಟ್ಟಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ದಾವಣಗೆರೆಯ ಶಾಲೆಗಳಲ್ಲಿ ಸಾವರ್ಕರ್ ಫೋಟೋ ಅಳವಡಿಸುವ ವಿಚಾರವಾಗಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಬಾರದು?. ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಶಾಲೆಯಲ್ಲಿ ಹಾಕುವುದು ಸರಿಯಾದ ನಿರ್ಧಾರ. ಮಹಾನ್ ವ್ಯಕ್ತಿಗಳ ಫೋಟೋ ನೋಡಿ ಮಕ್ಕಳಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ. ಸಾವರ್ಕರ್ ಫೋಟೋ ಹಾಕಲೇಬೇಕೆಂಬ ಬಲವಂತ ಅಥವಾ ಆದೇಶ ನಾವು ಮಾಡಿಲ್ಲ. ಅದು ಆಯಾ ಶಾಲೆಯ ಶಿಕ್ಷಕರಿಗೆ ಬಿಟ್ಟಿರುವ ವಿಚಾರ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಯಾರ್ಯಾರು ಸ್ವಾತಂತ್ರ್ಯ ತರಲು ಕಷ್ಟಪಟ್ಟರು? ಇದೆಲ್ಲವೂ ಮಕ್ಕಳಿಗೆ ಗೊತ್ತಾಗಲಿ. ಯಾರೋ ಒಂದಿಷ್ಟು ಜನ ಉಪವಾಸ ಕುಳಿತ ಮಾತ್ರಕ್ಕೆ ಸ್ವಾತಂತ್ರ್ಯ ಬಂದಿದೆ ಎಂದರೆ ಅದು ತಪ್ಪು. ಹಲವಾರು ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತಿದ್ದಾರೆ. ತ್ಯಾಗ, ಬಲಿದಾನ ಮಾಡಿದ್ದಾರೆ. ಇಂತಹ ವಿಷಯಗಳು ಇತಿಹಾಸದಿಂದ ಅಳಿಸಿ ಹೋಗಿದೆ. ಅದನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ನುಡಿದರು.
ಕಾಂಗ್ರೆಸ್ನವರು ಟಿಪ್ಪು ಫೋಟೋ ಹಾಕಲಿ: ನಾನು ಸಾವರ್ಕರ್ ಫೋಟೋ ಹಾಕುವ ಬಗ್ಗೆ ಹೇಳಿರುವೆ. ನನ್ನಂತೆಯೇ ಕಾಂಗ್ರೆಸ್ನವರು ಟಿಪ್ಪು ಫೋಟೋ ಹಾಕುತ್ತೇನೆಂದು ಹೇಳಲಿ. ನಾವು ಟಿಪ್ಪು ಜಯಂತಿ ಮಾಡ್ತೀವಿ. ಟಿಪ್ಪುವಿನಂತೆ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ದೇಶಭಕ್ತ ಮತ್ತೊಬ್ಬನಿಲ್ಲ ಎಂದು ಕಾಂಗ್ರೆಸಿಗರು ಹೇಳಲಿ. ನಮಗೇನು ಆಗಬೇಕಿಲ್ಲ. ನಮಗೆ ಯಾವತ್ತಿದ್ದರೂ ಟಿಪ್ಪು ಒಬ್ಬ ದೇಶದ್ರೋಹಿ. ದೇಶದ ಜನರ ಮೇಲೆ ಆಕ್ರಮಣ ಮಾಡಿದ್ದ. ಕೊಡಗಿನಲ್ಲಿ ಸಾವಿರಾರು ಜನರನ್ನು ಹತ್ಯೆ ಮಾಡಿದ್ದಲ್ಲದೇ, ಕೇರಳದಲ್ಲಿ ಲಕ್ಷಾಂತರ ಜನರನ್ನು ಮತಾಂತರ ಮಾಡಿದ್ದ. ಇದೆಲ್ಲವನ್ನೂ ನಾವು ಹೇಳುತ್ತಾ ಬಂದಿದ್ದೇವೆ. ಅಂತಹ ಒಬ್ಬ ವ್ಯಕ್ತಿಯ ಪೋಟೋವನ್ನು ಕಾಂಗ್ರೆಸಿಗರು ಹಾಕಿಕೊಳ್ಳುತ್ತಾರೆ ಅಂತಿದ್ರೆ, ಹಾಕಿಕೊಳ್ಳಲಿ ಎಂದು ಕೈ ನಾಯಕರಿಗೆ ಸಚಿವರು ಸವಾಲು ಹಾಕಿದರು.
ಇದನ್ನೂ ಓದಿ: ಸಾವರ್ಕರ್ಗೂ ಹಿಂಡಲಗಾ ಜೈಲಿಗೂ ಸಂಬಂಧವಿದೆ: ಸಚಿವ ಆರಗ ಜ್ಞಾನೇಂದ್ರ
ಕಾಂಗ್ರೆಸ್ ಗುಲಾಮಗಿರಿ ಪಾರ್ಟಿ: ಕಾಂಗ್ರೆಸ್ ಹೈಕಮಾಂಡ್ ಪವರ್ಲೆಸ್. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಮ್ಮ ರಾಜ್ಯವನ್ನು ಭಯೋತ್ಪಾದಕರ ಕೈಗೆ ಕೊಟ್ಟಂತೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ಕೇಸರಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸಿಗರಿಗಿಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿರುವ ನಾವು ಭಾರತೀಯರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷದವರ ಸಭೆ ಸಮಾರಂಭಗಳಲ್ಲಿ ಭಾರತ್ ಮಾತಾಕೀ ಜೈ ಅನ್ನೋ ಮಾತು ಬರುವುದೇ ಇಲ್ಲ. ಬದಲಾಗಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಕೀ ಜೈ ಅಂತಾನೇ ಹೇಳ್ತಾರೆ. ಮುಂದೆ ಹುಟ್ಟುವ ಅವರ ಮಕ್ಕಳಿಗೂ ಇವರುಗಳು ಜೈ ಅಂತಾರೆ. ಕಾಂಗ್ರೆಸ್ ಅಂದ್ರೆ ಗುಲಾಮಗಿರಿ ಪಕ್ಷ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ ಎಂದು ಕಿಡಿಕಾರಿದರು.
ಇದನ್ನೂ ಓದಿ: 'ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದದ ತವರು': ಸಿದ್ದರಾಮಯ್ಯ