ದಾವಣಗೆರೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್, ಕುಂದುವಾಡ ಕೆರೆಯಿಂದ ಆರಂಭಿಸಿ ನಗರ ಪ್ರದಕ್ಷಿಣೆ ಹಾಕಿದರು.
ಕುಂದುವಾಡ ಕೆರೆಯ ಮುಖ್ಯ ದ್ವಾರದ ಬಳಿ ರಾಜಕಾಲುವೆಗೆ ನಿರ್ಮಿಸಲಾಗುತ್ತಿರುವ ಮಳೆ ನೀರು ಸರಾಗವಾಗಿ ಹೋಗುವ ಬ್ರಿಡ್ಜ್ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಹಾಗೂ ಕುಂದುವಾಡ ಕೆರೆ ಆವರಣದಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಗ್ಲಾಸ್ ಹೌಸ್‍ಗೆ ಭೇಟಿ ನೀಡಿ ಈಗಾಗಲೇ ಮಂಜೂರಾಗಿರುವ 5 ಕೋಟಿ ವೆಚ್ಚದಲ್ಲಿ ಗಾಜಿನ ಮನೆಯ ಸೌಂದರ್ಯೀಕರಣ, ಉದ್ಯಾನವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೆಚ್ಚೆಚ್ಚು ಪ್ರವಾಸಿಗರು ಗಾಜಿನ ಮನೆಯತ್ತ ಆಕರ್ಷಿತರಾಗುವಂತೆ ಮಾಡಬೇಕೆಂದು ತಿಳಿಸಿದರು.
ಎಂಸಿಸಿ ಬಿ ಬ್ಲಾಕ್ನ ಹಿರಿಯ ನಾಗರಿಕರ ಪಾರ್ಕ್ಗೆ ಭೇಟಿ ನೀಡಿ ನಾಗರಿಕರೊಂದಿಗೆ ಸಂವಾದ ನಡೆಸಿ ಪಾರ್ಕ್‍ನಲ್ಲಿ ಶುಚಿತ್ವ ಕಾಪಾಡಿಕೊಳ್ಳುವಂತೆ ಪೌರಕಾರ್ಮಿಕರಿಗೆ ಸೂಚಿಸಿದರು. ಪೌರಕಾರ್ಮಿಕರ ಕುಂದು ಕೊರತೆ ಆಲಿಸಿ ತಮ್ಮ ಕೆಲಸಕ್ಕೆ ಅಗತ್ಯವಾದ ನೆರವು ನೀಡಲಾಗುವುದು ಎಂದರು.
ಹಾಗೆಯೇ ಬೂದಾಳು ರಸ್ತೆಯ ಪೌರ ಕಾರ್ಮಿಕರ ವಸತಿ ಗೃಹ ಕಾಲೋನಿಗೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ವಸತಿ ಗೃಹಗಳ ಕಾಮಗಾರಿ ವೀಕ್ಷಿಸಿ, ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತೆ ತಿಳಿಸಿದರು. ನಂತರ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.