ದಾವಣಗೆರೆ: ಕೊರೊನಾ ವಿರುದ್ಧ ಸಮರ ಸಾರಲು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ಜಿಲ್ಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೊರೊನಾ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೋವಿಡ್-19 ನಿಯಂತ್ರಣ ಹಾಗೂ ಲಾಕ್‍ಡೌನ್ ಹಿನ್ನೆಲೆ ಜಿಲ್ಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರು, ವಲಸಿಗರು ಸೇರಿದಂತೆ ಬಡವರಿಗೆ ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದ್ದು, ದೇಶದ ಬೆನ್ನೆಲುಬಾದ ರೈತರ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ನಾಡಿನ ಅನ್ನದಾತನಾದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಯಾವುದೇ ರೀತಿಯ ರೈತ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂದು ಸೂಚಿಸಿದರು.
ಆರೋಗ್ಯ, ಪೊಲೀಸ್, ಆಹಾರ, ಕಂದಾಯ ಸೇರಿದಂತೆ ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಸೇರಿದಂತೆ ಆರೋಗ್ಯ ಇಲಾಖೆಯು ಕೋವಿಡ್-19 ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಬೇಕು. ಎಲ್ಲಾ ಅಧಿಕಾರಿಗಳು ಸಮರ್ಥವಾಗಿ ಹಾಗೂ ಎಚ್ಚರಿಕೆಯಿಂದ ಕ್ರಮ ವಹಿಸುವ ಮೂಲಕ ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಬೇಕು ಹಾಗೂ ಜೊತೆಗೆ ಪಾಲಿಕೆ ಸದಸ್ಯರು ಈ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 1806 ಕಾರ್ಮಿಕರನ್ನು ಗುರುತಿಸಲಾಗಿದೆ. ಇದರಲ್ಲಿ 377 ಕಾರ್ಮಿಕರು ಬೇರೆ ರಾಜ್ಯದಿಂದ ಬಂದಿದ್ದಾರೆ. ಹರಿಹರದಲ್ಲಿ 27 ಜನರು, ನ್ಯಾಮತಿಯಲ್ಲಿ 31, ಹೊನ್ನಾಳಿಯಲ್ಲಿ 10 ಜನರಿದ್ದಾರೆ. ಮಾಲೀಕರ ಶೆಲ್ಟರ್ನಲ್ಲಿ ಸುಮಾರು 720 ಕಾರ್ಮಿಕರಿದ್ದು, 790 ಜನರು ವಿವಿಧೆಡೆ ಶೆಲ್ಟರ್ಗಳಲ್ಲಿದ್ದಾರೆ. ಇವರೆಲ್ಲರಿಗೂ ಆಹಾರದ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು
ಜಿಲ್ಲೆಯಲ್ಲಿ ವರದಿಯಾಗಿದ್ದ ಮೂರು ಪಾಸಿಟಿವ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟಾಕ್ಟ್ ಪರೀಕ್ಷೆ ನಡೆಸಲಾಗಿ ಎಲ್ಲರ ವರದಿ ನೆಗೆಟಿವ್ ಬಂದಿದೆ. ದೆಹಲಿ ಪ್ರವಾಸ ಹಿನ್ನೆಲೆ ಹೊಂದಿದ್ದ 41 ಜನರ ಟೆಸ್ಟ್ ಮಾಡಿಸಿದ್ದು, ಎಲ್ಲ ನೆಗೆಟಿವ್ ಬಂದಿವೆ. ಇವರಲ್ಲಿ ನಾಲ್ಕು ವರದಿ ಬರುವುದು ಬಾಕಿ ಇದೆ. ಸರ್ಕಾರದ ಆದೇಶದಂತೆ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಎರಡು ಎಪಿಸೆಂಟರ್ ಝೋನ್‍ಗಳನ್ನು ಜೋಡಿಸಿ ಒಂದು ಕ್ಲಸ್ಟರ್ ಕಂಟೈನ್‍ಮೆಂಟ್ ಝೋನ್ ಮಾಡಿ ಆ ಪ್ರದೇಶದಲ್ಲಿ ಎಲ್ಲ ಮನೆಗಳಿಗೆ ತೆರಳಿ ಆರೋಗ್ಯ ಸರ್ವೇ ಮಾಡಲಾಗಿದೆ. (ಐಎಲ್‍ಐ)ಫ್ಲೂ ಮತ್ತು (ಎಸ್ಎಆರ್ಐ) ಗಂಭೀರ ಉಸಿರಾಟದ ತೊಂದರೆ ಇರುವ ಪ್ರಕರಣಗಳನ್ನೂ ಟೆಸ್ಟ್ಗೆ ಕಳುಹಿಸಲಾಗುತ್ತಿದೆ. ಸದ್ಯಕ್ಕೆ ಇಂತಹ ಪ್ರಕರಣಗಳು ಹೆಚ್ಚಿಲ್ಲ ಎಂದು ತಿಳಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೊರೊನಾ ಹಿನ್ನೆಲೆ ಜರ್ಮನಿಯಲ್ಲಿ ಪ್ರತಿ ಮನೆಗಳಿಗೆ ವೈದ್ಯರು ತೆರಳಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಇದೇ ರೀತಿ ದಾವಣಗೆರೆಯಲ್ಲೂ ಪ್ರತಿ ಮನೆಗೆ ತೆರಳಿ ಪರೀಕ್ಷೆ ಕೈಗೊಂಡರೆ ಉತ್ತಮ. ತಮ್ಮ ವತಿಯಿಂದ ವೈದ್ಯರು ಮತ್ತು ಶುಶ್ರೂಷಕರನ್ನು ಒದಗಿಸಲಾಗುವುದು. ಆದರೆ ಸರ್ಕಾರದಿಂದ ಕಿಟ್ಗಳ ವ್ಯವಸ್ಥೆ ಮಾಡಬೇಕು. ಹೀಗೆ ಎಲ್ಲರಿಗೆ ಪರೀಕ್ಷೆ ಮಾಡುವ ಮೂಲಕ ದೇಶಕ್ಕೇ ನಮ್ಮ ಜಿಲ್ಲೆ ಮಾದರಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.