ದಾವಣಗೆರೆ: ವ್ಯಕ್ತಿಯೊಬ್ಬ ಇಬ್ಬರ ಮೇಲೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ. ಹಾಲಸ್ವಾಮಿ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ಗ್ರಾಮದ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಚಾಕು ಇರಿತಕ್ಕೆ ಒಳಗಾಗಿದ್ದು, ಮತ್ತೊಬ್ಬರು ತಪ್ಪಿಸಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ಭಯಾನಕ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹಾಲಸ್ವಾಮಿ ತನ್ನ ಅಣ್ಣನನ್ನು ಕೊಲೆ ಮಾಡಿದ ಆರೋಪಿಗಳಿಗೆ ಜಾಮೀನು ಕೊಡಿಸಲು ಸಹಕಾರ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಮೇಲೆ ಚಾಕು ಇರಿದಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆ ವಿವರ: ಕಳೆದ ವರ್ಷ ಗೌರಿಪುರ ಗ್ರಾಮದ ಹೋರಾಟಗಾರ ರಾಮಕೃಷ್ಣ ಎಂಬುವರ ಕೊಲೆಯಾಗಿತ್ತು. ಕೊಲೆ ಆರೋಪಿ ಧನ್ಯಕುಮಾರ್ಗೆ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಅವರು ಜಾಮೀನು ಕೊಡಿಸಲು ಸಹಕಾರ ನೀಡುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆಯ ಭಾಗವಾಗಿ ರಾಮಕೃಷ್ಣ ಸಹೋದರ ಹಾಲಸ್ವಾಮಿಯು ಗ್ರಾಮದ ಚಂದ್ರಪ್ಪ ಆತನ ಪುತ್ರ ಹೇಮಂತನಿಗೆ ಚಾಕುವಿನಿಂದ ಇರಿದಿದ್ದಾನೆ. ಇನ್ನು ಚಾಕು ಇರಿತದಿಂದ ರಕ್ಷಿಸಿಕೊಳ್ಳಲು ಚಂದ್ರಪ್ಪ ಹಾಗೂ ಹೇಮಂತ್ ಇಬ್ಬರು ದೊಣ್ಣೆಗಳಿಂದ ಹಾಲಸ್ವಾಮಿ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ.
''ಚಾಕು ಇರಿತಕ್ಕೆ ಒಳಗಾದ ಚಂದ್ರಪ್ಪ ಮತ್ತು ಹೇಮಂತನನ್ನು ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಡಿಎಆರ್ ಪೊಲೀಸ್ ಬಿಗಿ ಭದ್ರತೆ ಆಯೋಜನೆ ಮಾಡಲಾಗಿದೆ'' ಎಂದು ಸಿಪಿಐ ಶ್ರೀನಿವಾಸ್ ರಾವ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಪ್ರತಿ ದಾಳಿಯಿಂದ ಗಾಯಗೊಂಡಿರುವ ಹಾಲಸ್ವಾಮಿ ಕೂಡ ಚಿಗಟೇರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ಯುವಕನ ಸಂಬಂಧಿ ಅರೆಬೆತ್ತಲೆಗೊಳಿಸಿ ಥಳಿತ ಆರೋಪ: ಓಡಿ ಹೋಗಿದ್ದ ಜೋಡಿ ಎಸ್ಪಿಗೆ ಮೊರೆ
ಲಾಂಗ್ ಹಿಡಿದು ಹೊಡೆದಾಟ( ಚಿಕ್ಕಮಗಳೂರು): ಜಮೀನು ವಿಚಾರವಾಗಿ ಎರಡು ಕುಟುಂಬಗಳು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದ ಘಟನೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಟ್ಟನಪಾಳ್ಯ ಗ್ರಾಮದಲ್ಲಿ ನಡೆದಿತ್ತು. ಕೈಯಲ್ಲಿ ಕುಡುಗೋಲು, ಲಾಂಗ್ ಹಿಡಿದು ಪುರುಷರು ಮತ್ತು ಮಹಿಳೆಯರು ಬಡಿದಾಡಿಕೊಂಡಿದ್ದರು. ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಎರಡು ಕುಟುಂಬದವರು ಸಖರಾಯಪಟ್ಟಣ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಜಮೀನು ಗಲಾಟೆ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ: ಕುಡುಗೋಲು, ಲಾಂಗ್ ಹಿಡಿದು ಹೊಡೆದಾಟ