ದಾವಣಗೆರೆ: ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯಲ್ಲಿ ಮದ್ರಾಸ್ ಐ ವೈರಸ್ ಸೋಂಕು ಹರಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲಾಸ್ಪತ್ರೆಗೆ ದಿನನಿತ್ಯ ಕಡಿಮೆ ಎಂದರೂ 30ರಿಂದ 40 ಮದ್ರಾಸ್ ಐ ವೈರಸ್ ಸೋಂಕಿತ ಮಕ್ಕಳು, ವಯಸ್ಕರು ಚಿಕಿತ್ಸೆಗೆಂದು ಭೇಟಿ ನೀಡುತ್ತಿದ್ದಾರೆ.
ಕಣ್ಣಿನ ಸೋಂಕು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಮುಂಜಾಗ್ರತೆ ಕ್ರಮಗಳು ಅಗತ್ಯ ಎನ್ನುತ್ತಾರೆ ವೈದ್ಯರು. ಕಣ್ಣಿನಲ್ಲಿ ಪಿಸುರು, ಊದಿಕೊಳ್ಳುವುದು, ಕೆಂಪಾಗುವುದು ಈ ವೈರಸ್ ಗುಣಲಕ್ಷಣಗಳು. ಹಲವು ದಿನಗಳಿಂದ ವಿಚಿತ್ರ ರೀತಿಯಲ್ಲಿ ಹರಡುತ್ತಿರುವ ಮದ್ರಾಸ್ ಐ ಶಾಲೆ, ಹಾಸ್ಟೆಲ್ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಸೋಂಕಿತ ಮಕ್ಕಳನ್ನು ಒಂದು ವಾರ ಶಾಲೆ ಕಳುಹಿಸದಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಸೂಚನೆ ನೀಡಿವೆ.
ನೇತ್ರ ತಜ್ಞರ ಮಾತು: ದಾವಣಗೆರೆ ಜಿಲ್ಲಾ ಸಿಜಿ ಆಸ್ಪತ್ರೆಯ ನೇತ್ರ ತಜ್ಞ ಡಾ.ಎಸ್.ಎಸ್.ಕೋಳಕೂರ್ ಮಾತನಾಡಿ, "ಇದೊಂದು ಅಂಟು ರೋಗವಿದ್ದಂತೆ. ನಮ್ಮ ಜಿಲ್ಲಾಸ್ಪತ್ರೆಯ ಹೊರರೋಗಿಗಳ ಕಣ್ನು ವಿಭಾಗದಲ್ಲಿ ಇಲ್ಲಿಯತನಕ ಇಂಥ 600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಮದ್ರಾಸ್ ಐ ಎಂದು ಕರೆಯುತ್ತೇವೆ. ಸೋಂಕು ತಗುಲಿದಾಗ ಕಣ್ಣು ಕೆಂಪಾಗುವುದು, ಕಣ್ಣು ಚುಚ್ಚುವುದು, ಮಂಜಾದಂತೆ ಕಾಣುವುದು ಹಾಗೂ ಕಣ್ಣಿನಲ್ಲಿ ಪಿಸು ಬರುವುದು ಸಾಮಾನ್ಯ ಲಕ್ಷಣಗಳಾಗಿವೆ" ಎಂದರು.
"ಜುಲೈ 17ರ ತನಕ ಜಿಲ್ಲೆಯಲ್ಲಿ ವಿಪರೀತ ಪ್ರಕರಣಗಳು ಕಂಡುಬಂದಿದ್ದು, ಇದೀಗ ಸ್ವಲ್ಪ ಇಳಿಮುಖವಾಗಿದೆ. ಮದ್ರಾಸ್ ಐ ವೈರಸ್‌ಪೀಡಿತ ವ್ಯಕ್ತಿ ಬಳಸುವ ವಸ್ತುಗಳನ್ನು ಬೇರೊಬ್ಬರು ಬಳಕೆ ಮಾಡಿದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು" ಎಂದು ತಿಳಿಸಿದ್ದಾರೆ.
"ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗದಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಇಲ್ಲಿಗೆ ಬರುವ ರೋಗಿಗಳನ್ನು ತಜ್ಞರು ನೋಡಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಮುಂಜಾಗ್ರತೆ ಕ್ರಮಗಳ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕು ಬಂದರೂ ಕೂಡ ಮೂರ್ನಾಲ್ಕು ದಿನಗಳಲ್ಲಿ ವಾಸಿಯಾಗುತ್ತದೆ. ತಕ್ಷಣ ಆಸ್ಪತ್ರೆ ಭೇಟಿ ನೀಡಿ ನೇತ್ರಾ ತಜ್ಞರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು" ಎಂದು ನೇತ್ರ ತಜ್ಞ ಡಾ.ಎಸ್.ಎಸ್.ಕೋಳಕೂರ್ ಸಲಹೆ ನೀಡಿದರು.
ಮುನ್ನೆಚ್ಚರಿಕೆ ಹೀಗಿರಲಿ: ಸೋಂಕು ತಗುಲಿದವರ ವಸ್ತುಗಳನ್ನು ಬೇರೊಬ್ಬರು ಬಳಕೆ ಮಾಡಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು ಉತ್ತಮ.
ಮೂರ್ನಾಲ್ಕು ದಿನದಲ್ಲಿ ಸೋಂಕು ವಾಸಿ: ದಾವಣಗೆರೆ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಡಾ.ಹೆಚ್. ಎಂ.ರವೀಂದ್ರನಾಥ್ ಮಾತನಾಡಿ, "ಇದುವರೆಗೂ 500ಕ್ಕೂ ಮಕ್ಕಳಿಗೆ ಚಿಕಿತ್ಸೆ ನೀಡಿದ್ದೇನೆ. 8ರಿಂದ 10 ದಿನಗಳಿಂದ ಮದ್ರಾಸ್ ಐ ವೈರಸ್ ತಗುಲಿ ಕಣ್ಣಿನ ಸಮಸ್ಯೆಯಿಂದ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಇದೊಂದು ವೈರಸ್ ಇನ್ಫೆಕ್ಷನ್. ಶಾಲೆಯಲ್ಲಿ ಮಕ್ಕಳು ಸಾಮೂಹಿಕವಾಗಿ ಬೆರೆಯುತ್ತಿರುವದರಿಂದ ವೈರಸ್ ಮಕ್ಕಳಲ್ಲಿ ಬೇಗ ಹರಡುತ್ತಿದೆ. ಬಳಿಕ ಕುಟುಂಬದವರಲ್ಲೂ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಸ್ವಲ್ಪ ಎಚ್ಚರಿಕೆ ವಹಿಸಿ ಎಂದರು.
ಇದನ್ನೂಓದಿ: ಮಾನ್ಸೂನ್ನಲ್ಲಿ ಕಾಡುತ್ತಿದ್ಯಾ ಕೀಲು ನೋವು; ಇಲ್ಲಿದೆ ಇದಕ್ಕೆ ಪರಿಹಾರ