ಬೆಂಗಳೂರು/ದಾವಣಗೆರೆ/ಕೊಡಗು/ಕೊಪ್ಪಳ : ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಹುದ್ದೆಯಲ್ಲಿರುವ ದಂಪತಿ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್ ಹಾಗೂ ಅವರ ಪತ್ನಿ ಬಿಬಿಎಂಪಿ ಎಇ ಹೆಚ್. ಭಾರತಿ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
ಚಿತ್ರದುರ್ಗ ಲೊಕಾಯುಕ್ತ ಎಸ್ಪಿ ವಾಸುದೇವ್ ರಾಮ್ ಹಾಗೂ ಡಿವೈಎಸ್ಪಿ ಮೃಂತುಂಜಯ್ಯ ನೇತೃತ್ವದ ತಂಡದಿಂದ ದಾವಣಗೆರೆ ನಗರದ ಜಯನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.
ಚನ್ನಗಿರಿ ಅರಣ್ಯ ಇಲಾಖೆ ಆರ್.ಎಫ್.ಒ ಮನೆ ಮೇಲೂ ದಾಳಿ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಚನ್ನಗಿರಿ ಅರಣ್ಯ ಇಲಾಖೆ ಆರ್.ಎಫ್.ಒ ಸತೀಶ್ ಮನೆ ಮೇಲೆ ಮೊದಲು ದಾಳಿ ನಡೆಸಿದ ಅಧಿಕಾರಿಗಳು, ಬಳಿಕ ಶಿವಮೊಗ್ಗದಲ್ಲಿರುವ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇನ್ಸ್‌ಪೆಕ್ಟರ್ ನಂದೀಶ್ ಹಾಗೂ ಮಧುಸೂಧನ್ ತಂಡದಿಂದ ಶೋಧ ಮಾಡಲಾಗುತ್ತಿದೆ.
ಬಿಬಿಎಂಪಿ ರೆವಿನ್ಯೂ ಇನ್ಸ್‌ಪೆಕ್ಟರ್ ಮನೆ ಮೇಲೆ ದಾಳಿ: ಬಿಬಿಎಂಪಿ ಮಹದೇವಪುರ ವಲಯದ ರೆವಿನ್ಯೂ ಇನ್ಸ್‌ಪೆಕ್ಟರ್ ನಟರಾಜ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ನಟರಾಜ್ ಅವರ ಬನಶಂಕರಿ ನಿವಾಸ, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ನಟರಾಜ್ ಮಾತ್ರವಲ್ಲದೇ ಬೆಂಗಳೂರಿನ ಹತ್ತಕ್ಕೂ ಹೆಚ್ಚು ಕಡೆ ವಿವಿಧ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಶಿವಮೊಗ್ಗ: ದಾವಣಗೆರೆ ಜಿಲ್ಲೆ ಚನ್ನಗಿರಿ ವಲಯ ಸಂರಕ್ಷಣಾಧಿಕಾರಿ ಸತೀಶ್ ಅವರ ಶಿವಮೊಗ್ಗದ ಮನೆ ಮೇಲೆಯೂ ದಾವಣಗೆರೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಡಾಲರ್ಸ್ ಕಾಲೋನಿಯ ವೃಷಾಭಾದ್ರಿ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದಡಿ ಸತೀಶ್ ರವರ ಚನ್ನಗಿರಿ ಅರಣ್ಯ ಇಲಾಖೆಯ ವಸತಿ ಗೃಹ ಸೇರಿದಂತೆ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಕೌಲಪುರೆ ಅವರ ಆದೇಶದ ಮೇರೆಗೆ ದಾವಣಗೆರೆಯ ಇಬ್ಬರು ಇನ್ಸಪೆಕ್ಟರ್ ಸೇರಿದಂತೆ 6 ಜನರ ತಂಡ ಎರಡು ವಾಹನದಲ್ಲಿ ಬಂದು ತಪಾಸಣೆ ನಡೆಸುತ್ತಿದ್ದಾರೆ.
ತುಮಕೂರು ನಗರ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕರ ಮನೆ ಮೇಲೆ ದಾಳಿ: ತುಮಕೂರು ನಗರ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ನಾಗರಾಜ ಮನೆ ಮೇಲೆ ದಾಳಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ನಾಗರಾಜ್ ಅವರಿಗೆ ಸೇರಿದ ಮನೆ ಮೇಲೆ ಬೆಳಗ್ಗೆ ಸುಮಾರು ಐದು ಗಂಟೆ ವೇಳೆಗೆ ಅಧಿಕಾರಿಗಳು ದಾಳಿ ನಡೆಸಿ ಕಾಗದಪತ್ರ ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಸಪ್ತಗಿರಿ ಬಡಾವಣೆಯಲ್ಲಿರುವ ನಿವಾಸ ಹಾಗೂ ಪಾವಗಡ ತಾಲೂಕು ಅರಸೀಕೆರೆಯ ನಿವಾಸ ಹಾಗೂ ಟೂಡಾ ಕಚೇರಿಯಲ್ಲಿ ಮೂರು ಪ್ರತ್ಯೇಕ ತಂಡಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಕಳೆದ 18 ತಿಂಗಳಿನಿಂದ TUDA ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಮನೆ ಮೇಲೆ ದಾಳಿ : ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್ಕುಮಾರ್ ಮನೆ ಮೇಲೆ ದಾಳಿ ಮಾಡಲಾಗಿದೆ. ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿ ಹಾಗೂ ಹುಚಕನಳ್ಳಿ ಗ್ರಾಮದ ಮನೆಗಳ ಮೇಲೂ ದಾಳಿ ನಡೆಸಲಾಗಿದೆ.
ನಿರ್ಮಿತಿ ಕೇಂದ್ರದ ಅಧಿಕಾರಿಗೆ ಶಾಕ್ : ಕೊಪ್ಪಳದ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಕೆಲಸ ಮಾಡುವ ಕಚೇರಿ ಹಾಗೂ ಮನೆ ಮೇಲೆ ಲೋಕಾಯಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು ಐದು ತಂಡಗಳಲ್ಲಿ ದಾಳಿ ನಡೆಸಲಾಗಿದ್ದು, ಕೊಪ್ಪಳದ ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಕಚೇರಿ ಮತ್ತು ಮಂಜುನಾಥ್ ಹೂಡಿಕೆ ಮಾಡಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಮಾರ್ಕ್ ಇನ್ ಲಾಡ್ಜ್ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಕೊಡಗಿನಲ್ಲೂ ದಾಳಿ : ಕೊಡಗು ಎಡಿಸಿ ನಂಜುಂಡೇಗೌಡ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿ ಇರುವ ಮನೆ ಮೇಲೆ ಲೋಕಾಯುಕ್ತ ಎಸ್ ಪಿ. ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ ಪವನ್ ಕುಮಾರ್, ಇನ್ಸ್‌ಪೆಕ್ಟರ್ ಲೋಕೇಶ್ ಮತ್ತು ಸಿಬ್ಬಂದಿ ಪರಿಶೀಲನೆ ಕೈಗೊಂಡಿದ್ದಾರೆ. ಪಿರಿಯಾಪಟ್ಟಣದಲ್ಲಿರುವ ಮಾವನ ಮನೆ ಹಾಗೂ ಮೈಸೂರಿನಲ್ಲಿ ಇರುವ ಸಂಬಂಧಿಕರ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ : ಕೊಡಗು ಅಪರ ಜಿಲ್ಲಾಧಿಕಾರಿ ಮನೆಯಲ್ಲೂ ಪರಿಶೀಲನೆ