ಹರಿಹರ: ಆಸ್ಪತ್ರೆಯಲ್ಲಿ ದಿನಗೂಲಿ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಕಳೆದ ಐದು ತಿಂಗಳಿಂದ ವೇತನ ಕೊಡದಿರುವುದನ್ನು ಖಂಡಿಸಿ ದಿನಗೂಲಿ ಕಾರ್ಮಿಕರ ಸಂಘದ ವತಿಯಿಂದ ತಹಶೀಲ್ದಾರ್ ಕೆ.ಬಿ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 25 ಜನ ದಿನಗೂಲಿ ಮತ್ತು ಗುತ್ತಿಗೆ ಆಧಾರದಲ್ಲಿ ಸೇವೆಸಲ್ಲಿಸುತ್ತಿದ್ದು, ಇವರಿಗೆ ಐದು ತಿಂಗಳಿಂದ ವೇತನ ನೀಡಿಲ್ಲ. ಇದನ್ನು ಖಂಡಿಸಿ ಕಾರ್ಮಿಕರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಹೆಚ್. ಕೆ ಕೊಟ್ರಪ್ಪ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯ ದಿನಗೂಲಿ ನೌಕರರ ವೇತನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ನಾವು ನಿಮಗೆ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಕಳೆದ 5 ತಿಂಗಳಿಂದ ಇವರಿಗೆ ವೇತನ ಬಿಡುಗಡೆಯಾಗಿರುವುದಿಲ್ಲ. ಈ ಕಾರ್ಮಿಕರು ಸ್ವಚ್ಛತೆ, ಕೋವಿಡ್ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಸಹ ಕಾರ್ಯ ನಿರ್ವಹಿಸುತ್ತಿದ್ದು, ಇವರುಗಳ ಕುಟುಂಬ ನಿರ್ವಹಣೆ ಮಾಡಲು ತುಂಬಾ ತೊಂದರೆಯಾಗಿದೆ.
ವೇತನ ವಿಳಂಬದ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಾಲೂಕು ಆರೋಗ್ಯಾಧಿಕಾರಿ ಮತ್ತು ಆಡಳಿತ ವೈದ್ಯಾಧಿಕಾರಿ ಜೊತೆಯಲ್ಲಿ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಈ ತಕ್ಷಣವೇ ವೇತನ ನೀಡಬೇಕು. ಪದೇಪದೆ ವಿಳಂವವಾಗುತ್ತಿರುವ ವ್ಯವಸ್ಥೆಯನ್ನು ಸರಿಪಡಿಸಿ ಈ ವಿಳಂಬಕ್ಕೆ ಕಾರಣರಾದವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ನೌಕರರ ಸಮಸ್ಯೆಗಳ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಟಿಹೆಚ್‌ಓ ಡಾ.ಡಿ. ಚಂದ್ರಮೋಹನ್, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಎಲ್. ಹನುಮನಾಯ್ಕ್, ಕಂದಾಯ ಇಲಾಖೆ ರಾಜ್ಯ ಸ್ವ ನಿರೀಕ್ಷಕ ಆನಂದ, ನಗರ ಗ್ರಾಮ ಲೆಕ್ಕಾಧಿಕಾರಿ ಹೆಚ್.ಜಿ ಹೇಮಂತ್ ಕುಮಾರ್, ಸಂಘದ ಅಧ್ಯಕ್ಷ ಪಂಚಾಕ್ಷರಿ, ಕಾರ್ಯದರ್ಶಿ ಎನ್.ಇ ಸುರೇಶ್ ಸ್ವಾಮಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.